
ಮಹಿಳೆಯೊಬ್ಬರು ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡಲು ಕರೆದುಕೊಂಡು ಬರುವ ವಿಡಿಯೊ ತುಣುಕೊಂದನ್ನು ಬಳಕೆದಾರರೊಬ್ಬರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಧಿಕಾರಿಯೊಬ್ಬರು, ‘ತಾಯಿಯನ್ನು ಇಲ್ಲಿ ಯಾಕೆ ಬಿಡುತ್ತಿದ್ದೀರಿ’ ಎಂದು ಕೇಳಿದಾಗ, ‘ನಮ್ಮ ಮನೆಯಲ್ಲಿ ಸಾಕಷ್ಟು ಜಾಗ ಇಲ್ಲ’ ಎಂದು ಮಹಿಳೆ ಉತ್ತರಿಸುವ ದೃಶ್ಯವೂ ವಿಡಿಯೊದಲ್ಲಿದೆ. ಆ ಅಧಿಕಾರಿಯು ವೃದ್ಧೆಯನ್ನು ಕೇಳಿದಾಗ, ತನಗೆ ಇಲ್ಲಿಗೆ ಬರುವುದಕ್ಕೆ ಇಷ್ಟವಿಲ್ಲ ಎಂದು ಹೇಳುವುದೂ ಇದೆ. ‘ಮಹಿಳೆಯು ಹಿರಿ ವಯಸ್ಸಿನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದಾರೆ. ಮಗಳಾಗಿ ಆಕೆ ವಿಫಲರಾದ್ದಾರೆ’ ಎಂಬ ಒಕ್ಕಣೆಯೂ ಪೋಸ್ಟ್‌ನಲ್ಲಿದೆ. ಆದರೆ, ಇದು ನಿಜವಲ್ಲ.
ವಿಡಿಯೊದ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಹಲವರು ಇದೇ ಪೋಸ್ಟ್ ಹಂಚಿರುವುದು ಕಂಡು ಬಂತು. ಆಶಿಸ್ ವಾಟ್ಸ್ ಎಂಬವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೊ ಪೋಸ್ಟ್ ಮಾಡಿರುವುದು ಸಿಕ್ಕಿತು. ತಾವು ಡಿಜಿಟಲ್ ಕ್ರಿಯೇಟರ್ ಎಂದು ಬರೆದುಕೊಂಡಿರುವ ಅವರು 2025ರ ಡಿಸೆಂಬರ್ 23ರಂದು ಈ ವಿಡಿಯೊ ಪೋಸ್ಟ್ ಮಾಡಿದ್ದರು. ಆ ಖಾತೆಯನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಿದಾಗ ಈ ವಿಡಿಯೊವನ್ನು ಪೂರ್ವಯೋಜಿತವಾಗಿ ಚಿತ್ರೀಕರಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದರು. ‘ಜಾಗೃತಿ ಉದ್ದೇಶಕ್ಕಾಗಿ ಈ ವಿಡಿಯೊವನ್ನು ಮಾಡಲಾಗಿದೆ’ ಎಂದು ಅವರು ಸ್ಪಷ್ಟವಾಗಿ ನಮೂದಿಸಿದ್ದರು. ಈ ವಿಡಿಯೊದಲ್ಲಿರುವ ಪಾತ್ರಧಾರಿಗಳನ್ನೇ ಬಳಸಿಕೊಂಡು ಇದೇ ಮಾದರಿಯ ಹಲವು ವಿಡಿಯೊಗಳು ಆ ಖಾತೆಯಲ್ಲಿ ಇತ್ತು. ಪೂರ್ವ ಯೋಜಿತವಾಗಿ ಚಿತ್ರೀಕರಿಸಲಾದ ವಿಡಿಯೊವನ್ನು ನೈಜ ವಿಡಿಯೊ ಎಂಬಂತೆ ಬಿಂಬಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.