ADVERTISEMENT

Fact Check: ಮಹಿಳೆ ಕಂತೆ ಕಂತೆ ಹಣ ಹಾಕಿದ್ದು ಅಯೋಧ್ಯೆಯ ರಾಮ ಮಂದಿರದಲ್ಲಿ ಅಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2024, 13:21 IST
Last Updated 5 ಫೆಬ್ರುವರಿ 2024, 13:21 IST
   

ಮಹಿಳೆಯೊಬ್ಬರು ಅಯೋಧ್ಯೆಯ ಶ್ರೀ ರಾಮ ಮಂದಿರದ ಹುಂಡಿಗೆ ಕಂತೆ ಕಂತೆ ನೋಟುಗಳನ್ನು ಹಾಕಿದ್ದಾರೆ ಎಂದು ಹೇಳಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಯೋಧ್ಯೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಲಾದ ಬಾಲ ರಾಮನ ಮೂರ್ತಿಯ ಚಿತ್ರವನ್ನು ವಿಡಿಯೊ ಕೆಳಗೆ ಸೇರಿಸಿ ಎಡಿಟ್‌ ಮಾಡಲಾಗಿದೆ.

ಮಹಿಳೆಯು ರಾಮ ಮಂದಿರಕ್ಕೆ ₹ 3 ಲಕ್ಷ ದೇಣಿಗೆ ನೀಡಿದ್ದಾರೆ ಎನ್ನಲಾಗಿದ್ದು, ಅವರ ನಡೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಆದರೆ, ಈ ವಿಡಿಯೊ ರಾಮ ಮಂದಿರದಲ್ಲಿ ಚಿತ್ರೀಕರಿಸಿರುವುದಲ್ಲ. ರಾಜಸ್ಥಾನದ ಶ್ರೀ ಸೋನವಾಲಿಯಾ ಮಂದಿರದಲ್ಲಿ ಸೆರೆಹಿಡಿದದ್ದು ಎಂದು 'ಇಂಡಿಯಾ ಟುಡೇ' ವೆಬ್‌ಸೈಟ್‌ ಫ್ಯಾಕ್ಟ್‌ಚೆಕ್‌ ಮಾಡಿದೆ.

ADVERTISEMENT

ವಾಸ್ತವವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ಪರಿಶೀಲಿಸಿದಾಗ ಇದು 2023ರ ಸೆಪ್ಟೆಂಬರ್‌ 10ರಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೆಯಾಗಿರುವುದು ಪತ್ತೆಯಾಗಿದೆ.

'sethji_kadiwana' ಎಂಬ ಖಾತೆಯಲ್ಲಿ ಹಾಕಲಾಗಿರುವ ವಿಡಿಯೊದಲ್ಲಿರುವ ಮಾಹಿತಿ ಪ್ರಕಾರ, ಇದು ರಾಜಸ್ಥಾನದ ಚಿತ್ತೋಡಗಢ ಜಿಲ್ಲೆಯಲ್ಲಿರುವ ಶ್ರೀ ಸೋನವಾಲಿಯಾ ಮಂದಿರದಲ್ಲಿ ಚಿತ್ರೀಕರಿಸಿದ್ದಾಗಿದ್ದು, ಮಹಿಳೆಯು ₹ 10 ಲಕ್ಷ ನಗದನ್ನು ಹುಂಡಿಗೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಡಿಯೊಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 11ರಂದು ಪ್ರಕಟವಾಗಿರುವ ವರದಿಗಳಲ್ಲೂ ಆ ಮಾಹಿತಿಯನ್ನು ಖಚಿತಪಡಿಸಲಾಗಿದೆ.

ಮಹಿಳೆಯು, ಕಳೆದ ವರ್ಷ ಸೆಪ್ಟೆಂಬರ್‌ 7ರಂದು ನಡೆದ ಕೃಷ್ಣ ಜನ್ಮಾಷ್ಠಮಿ ದಿನದಂದು ದೇವಾಲಯಕ್ಕೆ ದೇಣಿಗೆ ನೀಡಿದ್ದಾರೆ ಎಂಬುದಾಗಿಯೂ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಆದಾಗ್ಯೂ, ಈ ವಿಡಿಯೊ ರಾಮ ಮಂದಿರದ್ದೇ ಅಥವಾ ರಾಜಸ್ಥಾನದ ದೇವಾಲಯದ್ದೇ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಸೋನವಾಲಿಯಾ ಮಂದಿರದ ಗರ್ಭಗುಡಿ ಹಾಗೂ ಕಾಣಿಕೆ ಹುಂಡಿ ಕಾಣುವಂತೆ ಚಿತ್ರೀಕರಿಸಿದ ಇನ್ನೊಂದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಎರಡೂ ವಿಡಿಯೊಗಳನ್ನು ಹೋಲಿಸಿ ನೋಡಿದಾಗ, ಕಾಣಿಕೆ ಹುಂಡಿಯ ವಿನ್ಯಾಸ ಒಂದೇ ರೀತಿಯಲ್ಲಿ ಇರುವುದು ಸ್ಪಷ್ಟವಾಗಿದೆ.

2023ರ ಸೆಪ್ಟೆಂಬರ್‌ 10ರಂದು ಹಂಚಿಕೆಯಾಗಿರುವ ವಿಡಿಯೊ
2023ರ ಸೆಪ್ಟೆಂಬರ್‌ 11ರಂದು ಪ್ರಕಟವಾಗಿರುವ ವರದಿ
ಶ್ರೀ ಸೋನವಾಲಿಯಾ ಮಂದಿರದ ಗರ್ಭಗುಡಿ ಎದುರು ಕಾಣಿಕೆ ಹುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.