ADVERTISEMENT

ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನ ಎನ್ನಲಾದ ವಿಡಿಯೊಗಳು ಸುಳ್ಳು

ಫ್ಯಾಕ್ಟ್ ಚೆಕ್
Published 25 ಡಿಸೆಂಬರ್ 2025, 23:30 IST
Last Updated 25 ಡಿಸೆಂಬರ್ 2025, 23:30 IST
.
.   

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ದೀಪು ಚಂದ್ರ ದಾಸ್‌ ಅವರನ್ನು ಬರ್ಬರವಾಗಿ ಹತ್ಯೆ ಮಾಡುವುದಕ್ಕೂ ಮೊದಲು ಪೊಲೀಸರೇ ಅವರನ್ನು ಉದ್ರಿಕ್ತರ ಕೈಗೆ ಒಪ್ಪಿಸಿದ್ದರು ಎಂದು ಪ್ರತಿಪಾದಿಸುತ್ತಾ, ವ್ಯಕ್ತಿಯೊಬ್ಬರು ಪೊಲೀಸರ ಮುಂದೆ ತಾನು ತಪ್ಪು ಮಾಡಿಲ್ಲ ಎಂದು ಅಳುತ್ತಾ ಹೇಳುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು. ಅದು ದೀಪು ಚಂದ್ರ ದಾಸ್‌ ಅವರ ವಿಡಿಯೊ ಅಲ್ಲ. 

ವಿಡಿಯೊ ತುಣುಕಿನ ಕೀ ಫ್ರೇಮ್‌ ಒಂದನ್ನು ರಿವರ್ಸ್‌ ಸರ್ಚ್‌ ವಿಧಾನದ ಮೂಲಕ ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಬಾಂಗ್ಲಾದೇಶದ ‘ಭೋರೆರ್‌ ಕಾಗಜ್‌’ ಎನ್ನುವ ಮಾಧ್ಯಮ ಸಂಸ್ಥೆಯು ಈ ವಿಡಿಯೊವನ್ನು ಇದೇ ವರ್ಷದ ನವೆಂಬರ್‌ 18ರಂದೇ ಅಪ್‌ಲೋಡ್‌ ಮಾಡಿರುವುದು ಕಂಡು ಬಂತು. ‘ಢಾಕಾದ ಈ ಕಾಲೇಜು ವಿದ್ಯಾರ್ಥಿಗೆ ಏನಾಯಿತು?’ ಎಂಬ ಶೀರ್ಷಿಕೆಯನ್ನೂ ಆ ಪೋಸ್ಟ್‌ಗೆ ನೀಡಲಾಗಿತ್ತು. ಹಾಗಾಗಿ, ಈ ವಿಡಿಯೊ ತುಣುಕು ಇತ್ತೀಚಿನ ಹಿಂಸಾಚಾರಕ್ಕೆ, ದೀಪು ಚಂದ್ರ ದಾಸ್‌ ಅವರಿಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇನ್ನಷ್ಟು ಹುಡುಕಿದಾಗ, ‘ಢಾಕಾ ನ್ಯೂಸ್‌ ಟುಡೇ’ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದೇ ವಿಡಿಯೊದ ವಿಸ್ತೃತ ತುಣಕನ್ನು ಅಪ್‌ಲೋಡ್‌ ಮಾಡಲಾಗಿತ್ತು. ‘ಪೊಲೀಸರಿಂದ ಏಟು ತಿಂದ ಢಾಕಾ ವಿದ್ಯಾರ್ಥಿ ಅಳುವುದಕ್ಕೆ ಆರಂಭಿಸಿದರು’ ಎಂಬ ಒಕ್ಕಣೆ ವಿಡಿಯೊದಲ್ಲಿತ್ತು. ಈ ವಿಡಿಯೊದ ಮೂಲ ಯಾವುದು ಎಂಬುದನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ಇದು ಹಳೆಯ ವಿಡಿಯೊವಾಗಿದ್ದು ದೀಪು ಚಂದ್ರ ದಾಸ್‌ ಅವರ ಹತ್ಯೆಗೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT