
ಭಾರತ ಸರ್ಕಾರದ ಅಧಿಕೃತ ದಾಖಲೆ ಎಂಬಂತೆ ಕಾಣುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಮೇಲೆ ‘ಟಾಪ್ ಸೀಕ್ರೆಟ್’ ಎನ್ನುವ ಮುದ್ರೆ ಇದೆ. ಪಾಕಿಸ್ತಾನದ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ದಾಖಲೆ ಪತ್ರವನ್ನು ಮರದ ಮೇಲಿಟ್ಟು ಫೋಟೊ ತೆಗೆಯಲಾಗಿದೆ. ಚಿತ್ರದ ಮೇಲಿನ ಬೆಳಕು ವಿಶಿಷ್ಟವಾಗಿದ್ದು, ಅಸಹಜ ಎನ್ನುವಂತಿದೆ. ದಾಖಲೆ ಪತ್ರದಲ್ಲಿ ‘ರಾಜಕೀಯ ಕೈದಿ’, ‘ಸುರಕ್ಷಿತ ತಾಣ’ ಇತ್ಯಾದಿ ಪದಗಳನ್ನು ಬಳಸಲಾಗಿದೆ. ಎಷ್ಟೇ ರಹಸ್ಯ ಪತ್ರಗಳಾದರೂ, ವಿದೇಶಾಂಗ ವ್ಯವಹಾರಗಳಲ್ಲಿ ಇಂಥ ಪದಗಳನ್ನು ಬಳಸುವುದಿಲ್ಲ. ಜತೆಗೆ ಇಮ್ರಾನ್ ಅಹಮದ್ ಖಾನ್ ನಿಯಾಜಿ ಎಂದು ಬರೆಯಲಾಗಿದೆ. ಆದರೆ, ಈ ಹಿಂದೆ ತನ್ನ ಅಧಿಕೃತ ಸಂವಹನದಲ್ಲಿ ಭಾರತವು ಇಮ್ರಾನ್ ಖಾನ್ ಎಂದೇ ಬಳಸಿತ್ತು. ಕೇಂದ್ರ ಸರ್ಕಾರದ ಯಾವುದೇ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಪ್ರಸ್ತಾಪ ಇಲ್ಲ. ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ ಈ ಸುದ್ದಿಯನ್ನು ನಿರಾಕರಿಸಿದೆ. ಪಾಕಿಸ್ತಾನದ ಸುಳ್ಳು ಸುದ್ದಿ ಜಾಲದ ಭಾಗವಾದ ಈ ನಕಲಿ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.