ADVERTISEMENT

ಪಾಕ್ ಕುಸ್ತಿಪಟುವನ್ನು ಭಾರತೀಯ ಕುಸ್ತಿಪಟು ಸೋಲಿಸಿದರು ಎನ್ನುವುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
   

‘ದುಬೈನಲ್ಲಿ ನಡೆದ ಮಹಿಳಾ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಾಕಿಸ್ತಾನದ ಮಹಿಳಾ ಕುಸ್ತಿಪಟು ಗೆದ್ದಿದ್ದರು. ಭಾರತೀಯ ಮಹಿಳೆಯರನ್ನು ಗೇಲಿ ಮಾಡಿದ ಅವರು ವೇದಿಕೆಯ ಮೇಲೆ ಯಾವುದೇ ಭಾರತೀಯ ಮಹಿಳೆ ಬಂದು ತನ್ನೊಂದಿಗೆ ಸ್ಪರ್ಧಿಸಬಹುದೇ ಎಂದು ಸವಾಲು ಹಾಕಿದರು. ಇದ್ದಕ್ಕಿದ್ದಂತೆ ತಮಿಳುನಾಡಿನ ಕವಿತಾ ವಿಜಯಲಕ್ಷ್ಮಿ ಎಂಬ ಹುಡುಗಿ ತಾನು ಸಿದ್ಧ ಎಂದು ಕೈ ಎತ್ತಿದಳು. ಚಾಮುಂಡಿ ರೂಪ ತಾಳಿ, ಕುಂಕುಮ ಧರಿಸಿ ವೇದಿಕೆ ಮೇಲೆ ಕಾಣಿಸಿಕೊಂಡು, ಎರಡು ಬಾರಿ ಪಾಕಿಸ್ತಾನದ ಕುಸ್ತಿಪಟುವನ್ನು ಸೋಲಿಸಿ ಗೆದ್ದಿದ್ದಾಳೆ. ನೋಡಿ ಆನಂದಿಸಿ. ನಮ್ಮ ದೇಶವನ್ನು ಅವಮಾನಿಸುವ ಯಾರಿಗಾದರೂ ಇದೇ ಭವಿಷ್ಯ’ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ದಿ ಗ್ರೇಟ್‌ ಖಲಿ ಅವರು ಜಲಂಧರ್‌ನಲ್ಲಿ ಆರಂಭಿಸಿದ ‘ಕಾಂಟಿನೆಂಟಲ್‌ ರೆಸ್ಲಿಂಗ್‌ ಎಂಟರ್‌ಟೈನ್‌ಮೆಂಟ್‌’ ಎಂಬ ಅಕಾಡೆಮಿಯಲ್ಲಿ 2016ರ ಜೂನ್‌ 13ರಂದು ನಡೆದ ಘಟನೆ ಇದು. ಈ ಕುಸ್ತಿಯಲ್ಲಿ ಇರುವ ಇಬ್ಬರೂ ಮಹಿಳೆಯರು ಭಾರತೀಯರು. ಪಾಕಿಸ್ತಾನದ ಕುಸ್ತಿಪಟು ಎಂದು ಹೇಳಿರುವ ಮಹಿಳೆಯ ಹೆಸರು ಬೀಬಿ ಬುಲ್‌ಬುಲ್‌. ಇವರು ಭಾರತದ ಮೊದಲ ವೃತ್ತಿಪರ ಕುಸ್ತಿಪಟು. ಕೇಸರಿ ಬಟ್ಟೆ ಧರಿಸಿರುವವರು ತಮಿಳುನಾಡಿನವರಲ್ಲ ಬದಲಿಗೆ ಅವರು ಹರಿಯಾಣದವರು. ಅವರು ಹೆಸರು ಕವಿತಾ ದೇವಿ. ಅಕಾಡೆಮಿಯ ಯೂಟ್ಯೂಬ್‌ ಪೇಜ್‌ನಲ್ಲಿ ಪೂರ್ಣ ವಿಡಿಯೊ ಇದೆ. 2020ರಿಂದಲೂ ಈ ವಿಡಿಯೊ ಇದೇ ಅಭಿಪ್ರಾಯದೊಂದಿಗೆ ಹಂಚಿಕೆಯಾಗುತ್ತಿದೆ. ಆದರೆ, ಇದರಲ್ಲಿ ಇರುವ ಮಾಹಿತಿಗಳೆಲ್ಲವೂ ಸುಳ್ಳು ಎಂದು ‘ದಿ ಇಂಡಿಯನ್‌ ಲಾಜಿಕಲ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT