
ಅಮೆರಿಕದ ಲೈಂಗಿಕ ಅಪರಾಧಿ ಎಪ್‌ಸ್ಟೈನ್ ಜೊತೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು (ಹಸ್ತಲಾಘವ ಮಾಡುತ್ತಿರುವುದು) ಇರುವ ಪ್ರತ್ಯೇಕ ಚಿತ್ರಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಲಾಗಿದೆ. ಹಲವರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಮಾಹಿತಿ.
2019ರಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ಗೆ ಸಂಬಂಧಿಸಿದ ದಾಖಲೆಗಳನ್ನು (ಮೊಬೈಲ್ ಮತ್ತು ಇಮೇಲ್) ಅಮೆರಿಕದ ನ್ಯಾಯಾಂಗ ಇಲಾಖೆಯು ಈಗ ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಜಗತ್ತಿನ ಹಲವು ಪ್ರಭಾವಿಗಳ ಹೆಸರುಗಳಿವೆ. ದಾಖಲೆಗಳು ಪ್ರಕಟವಾದ ನಂತರ ಈ ಪೋಸ್ಟ್‌ಗಳನ್ನು ಮಾಡಲಾಗಿದೆ. ಆದರೆ, ನ್ಯಾಯಾಂಗ ಇಲಾಖೆಯು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ದಾಖಲೆಗಳಲ್ಲಿ ಆತ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಇರುವ ಫೋಟೊಗಳು ಸಿಗಲಿಲ್ಲ. ಫೋಟೊಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದನ್ನು ಎಡಿಟ್ ಮಾಡಿರುವ ಅನುಮಾನ ಬಂತು. ಹೈವ್ ಮಾಡರೇಷನ್ ಮತ್ತು ಎಐ ವರ್ಸಸ್ ಹ್ಯೂಮನ್ ಇಮೇಜ್ ಡಿಟೆಕ್ಟರ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಮೂರೂ ಚಿತ್ರಗಳು ಎಐ ಸೃಷ್ಟಿ ಎಂಬುದು ದೃಢಪಟ್ಟಿತು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.