
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಅವರ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಈ ಮೂರ್ಖ ಕನ್ಹಯ್ಯ ಈ ಹಿಂದೆ ದೆಹಲಿಯಲ್ಲಿ ಮತ ಚಲಾಯಿಸಿದ್ದರು. ಈಗ ಬಿಹಾರದಲ್ಲಿ ಮತ್ತೆ ಮತ ಚಲಾವಣೆ ಮಾಡಿದ್ದಾರೆ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಚುನಾವಣೆಗೆ ಸ್ಪರ್ಧಿಸಿದವರ ಪ್ರಮಾಣಪತ್ರದ ಮಾಹಿತಿ ಇರುವ ‘MyNeta’ ಪೋರ್ಟಲ್‌ನಲ್ಲಿ ಪರಿಶೀಲನೆ ಮಾಡಿದಾಗ ಕನ್ಹಯ್ಯ ಅವರು ಬಿಹಾರದ ಟೆಘ್ರಾ ಕ್ಷೇತ್ರದ ಮತದಾರರಾಗಿ ನೋಂದಾಯಿಸಿಕೊಂಡಿರುವುದು ಕಂಡಿತು. 2019ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅವರು ಅಲ್ಲಿಯೇ ಮತದಾನ ಮಾಡಿದ್ದಾರೆ. ಈ ಬಗ್ಗೆ ಅವರು ಸುದ್ದಿಯನ್ನೂ ಹಂಚಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಆಧರಿಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ, 2024ರ ಮೇ 25ರಂದು ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಇದೇ ಚಿತ್ರ ಕಂಡಿತು. ಕನ್ಹಯ್ಯ ಕುಮಾರ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ವೇಳೆ ಅವರು ಚುನಾವಣಾ ಪ್ರಚಾರದ ಸಲುವಾಗಿ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಸಂಚರಿಸಿದ್ದರು. ಅದು ಆ ಸಂದರ್ಭದ ಚಿತ್ರ. ಮತದಾನ ಮಾಡಿದ ಚಿತ್ರ ಅಲ್ಲ. ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.