2025ರ ಜುಲೈ 25, 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ದೀವ್ಸ್‌ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಲೆಯಲ್ಲಿರುವ ರಕ್ಷಣಾ ಸಚಿವಾಲಯ ಕಟ್ಟಡದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಕ್ಷಣಾ ಸಚಿವಾಲಯ ಕಟ್ಟಡದ ಮೇಲೆ ಮೋದಿ ಅವರ ಚಿತ್ರವಿದ್ದು, ಅವರ ಚಿತ್ರದ ಮೇಲೆ ‘ಸರೆಂಡರ್’ (ಶರಣಾಗತಿ) ಎಂದು ಬರೆಯಲಾಗಿದೆ. ‘ಇದು ಮಾಲ್ದೀವ್ಸ್ ರಕ್ಷಣಾ ಸಚಿವಾಲಯದ ಮೇಲಿನ ಚಿತ್ರವಾಗಿದ್ದು, ಇದನ್ನು ಮಾಡಿದವರು ಯಾರು’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದು ‘ಡಿಡಿ ನ್ಯೂಸ್’ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2025ರ ಜುಲೈ 25ರಂದು ಪ್ರಕಟವಾಗಿದ್ದ ಚಿತ್ರಕ್ಕೆ ಸಂಪರ್ಕ ನೀಡಿತು. ‘ಮಾಲ್ಡೀವ್ಸ್‌ನ ಮಾಲೆಯಲ್ಲಿನ ರಕ್ಷಣಾ ಸಚಿವಾಲಯವು ಇಂದು ಕಂಡಿದ್ದು ಹೀಗೆ’ ಎಂದು ‘ಡಿಡಿ ನ್ಯೂಸ್’ ಅಡಿಬರಹದಲ್ಲಿ ಉಲ್ಲೇಖಿಸಿತ್ತು. ಮಾಲ್ದೀವ್ಸ್‌ನ ರಾಷ್ಟ್ರೀಯ ಭದ್ರತಾ ಪಡೆ ಮತ್ತು ಭಾರತದ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಖಾತೆಗಳಲ್ಲಿನ ವಿಡಿಯೊಗಳಲ್ಲಿಯೂ ಕಟ್ಟಡದ ಮೇಲಿನ ಮೋದಿ ಅವರ ಚಿತ್ರದ ಮೇಲೆ ‘ಸರೆಂಡರ್’ ಎನ್ನುವ ಪದ ಇಲ್ಲ. ಚಿತ್ರದಲ್ಲಿ ಕೆಲವು ವ್ಯತ್ಯಾಸಗಳಿದ್ದು, ಅದನ್ನು ‘ಹೈವ್ ಮಾಡರೇಷನ್’ ಮತ್ತು ‘ವಾಸ್ ಇಟ್ ಎಐ’ ಎಂಬ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದಾಗ, ಚಿತ್ರವನ್ನು ಎಐ ತಾಂತ್ರಿಕತೆ ಮೂಲಕ ತಿರುಚಲಾಗಿದೆ ಎನ್ನುವುದು ಸ್ಪಷ್ಟವಾಯಿತು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.