ADVERTISEMENT

Fact Check: ಚುನಾವಣಾ ಆಯೋಗದ ವಿರುದ್ಧ RJD ಬೆಂಬಲಿಗರು ಪ್ರತಿಭಟನೆ ನಡೆಸಿಲ್ಲ

ಫ್ಯಾಕ್ಟ್ ಚೆಕ್
Published 19 ನವೆಂಬರ್ 2025, 0:10 IST
Last Updated 19 ನವೆಂಬರ್ 2025, 0:10 IST
   

ಬಿಹಾರದ ಚುನಾವಣೆಯಲ್ಲಿ ಸೋತಿರುವ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಬೆಂಬಲಿಗರು ಮಂಗಳವಾರ (ನ.18) ಪಟ್ನಾದಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಇದರಲ್ಲಿ 2 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ ನಗರವೊಂದರ ರಸ್ತೆಗಳಲ್ಲಿ ಭಾರಿ ಜನಸ್ತೋಮ ಇರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ.
ಆದರೆ, ಇದು ಸುಳ್ಳು ಸುದ್ದಿ. 

ವಿಡಿಯೊದ ಕೀ ಫ್ರೇಮ್‌ ಒಂದನ್ನು ರಿವರ್ಸ್‌ ಇಮೇಜ್‌ ವಿಧಾನದ ಮೂಲಕ ಹುಡುಕಾಟ ನಡೆಸಿದಾಗ ಇದೇ ವಿಡಿಯೊ ತುಣುಕು 2022ರ ಡಿಸೆಂಬರ್‌ 21ರಂದು ಸಿಬಿಎಸ್‌ ನ್ಯೂಸ್‌ ವರದಿಯಲ್ಲಿ ‍ಪ್ರಸಾರವಾಗಿದ್ದು ಕಂಡು ಬಂತು. ಆ ವರ್ಷ ಅರ್ಜೆಂಟೀನಾವು ಫುಟ್‌ಬಾಲ್‌ ವಿಶ್ವಕಪ್‌ ಅನ್ನು ಗೆದ್ದ ಸಂಭ್ರಮಾಚರಿಸಲು ಭಾರಿ ಸಂಖ್ಯೆಯಲ್ಲಿ ಬಾಯನೊಸ್‌ ಏರೀಸ್‌ ನಗರದಲ್ಲಿ ಸೇರಿದ್ದ ಜನಸ್ತೋಮದ ವಿಡಿಯೊ ಅದಾಗಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಹಾಕಿ ಗೂಗಲ್‌ನಲ್ಲಿ ಹುಡುಕಿದಾಗ ಬೇರೆ ಮಾಧ್ಯಮಗಳಲ್ಲೂ 2022ರ ಡಿ.21ರಂದು ಸುದ್ದಿಗಳು ಪ್ರಕಟಗೊಂಡಿರುವುದು ಕಂಡು ಬಂತು. ಇನ್ನಷ್ಟು ಹುಡುಕಾಡಿದಾಗ ಬಿಹಾರದ ಪಟ್ನಾದಲ್ಲಿ ಆರ್‌ಜೆಡಿ ಬೆಂಬಲಿಗರು ಬೃಹತ್‌ ಪ್ರತಿಭಟನೆ ನಡೆಸಿರುವ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಸಿಗಲಿಲ್ಲ. ಹಾಗಾಗಿ, ಅರ್ಜೆಂಟೀನಾದ ಮೂರು ವರ್ಷ ಹಳೆಯ ವಿಡಿಯೊವನ್ನು ಪಟ್ನಾದಲ್ಲಿ ನಡೆದ ಪ್ರತಿಭಟನೆಯ ವಿಡಿಯೊ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT