ADVERTISEMENT

Fact Check | ಉತ್ತರಕಾಶಿಯಲ್ಲಿ ಮೇಘಸ್ಫೋಟ: ಈ ಚಿತ್ರ ನೈಜವಲ್ಲ

ಫ್ಯಾಕ್ಟ್ ಚೆಕ್
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
   

ಉತ್ತರಾಖಂಡದ ಉತ್ತರಕಾಶಿಯ ಧಾರಾಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟ ದುರಂತದ ನಂತರ ಆ ಘಟನೆಗೆ ಸಂಬಂಧಿಸಿದ ಹಲವು ರೀತಿಯ ವಿಡಿಯೊ ತುಣುಕುಗಳು, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಕಣಿವೆ ಪ್ರದೇಶದ ಮಧ್ಯದಲ್ಲಿ ನದಿ ಹರಿಯುತ್ತಿದ್ದು, ಅದರ ಎರಡೂ ಬದಿಗಳಲ್ಲಿ ಮಣ್ಣು, ಕಟ್ಟಡ ಕುಸಿದಿರುವುದು, ಮನೆಗಳು, ಕಟ್ಟಡಗಳ ಅವಶೇಷಗಳು ನೀರಿನಲ್ಲಿ ಸಿಲುಕಿರುವುದು ಚಿತ್ರದಲ್ಲಿ ಕಾಣಿಸುತ್ತಿದೆ. ಆದರೆ, ಇದು ಸುಳ್ಳು, ನೈಜ ಚಿತ್ರವಲ್ಲ. 

ಚಿತ್ರವನ್ನು ರಿವರ್ಸ್‌ ಇಮೇಜ್‌ ವಿಧಾನದ ಮೂಲಕ ಗೂಗಲ್‌ಲೆನ್ಸ್‌ನಲ್ಲಿ ಹಾಕಿದಾಗ, ಹಲವರು ಇದೇ ಚಿತ್ರವನ್ನು ಹಂಚಿಕೊಂಡಿರುವುದು ತಿಳಿದು ಬಂತು. ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿ ಎಐ ಎಂಬ ವಾಟರ್‌ ಮಾರ್ಕ್‌ ಇರುವುದು ಕಂಡಿತು. ಇದರ ಆಧಾರದಲ್ಲಿ ಎಐ ಚಿತ್ರ ಪತ್ತೆ ಟೂಲ್‌ ಹೈವ್‌ ಮಾಡರೇಷನ್‌ನಲ್ಲಿ ಚಿತ್ರವನ್ನು ಹಾಕಿದಾಗ, ಅದು ಎಐ ಚಿತ್ರ ಎಂಬುದು ದೃಢಪಟ್ಟಿತು. ಮತ್ತೊಂದು ಎಐ ಪತ್ತೆ ಟೂಲ್‌ ‘ವಾಸ್‌ಇಟ್‌ಎಐ’ನಲ್ಲಿ ಚಿತ್ರವನ್ನು ಹಾಕಿದಾಗಲೂ ಅದು ಎಐ ಚಿತ್ರ ಎಂಬುದನ್ನು ಖಚಿತಪಡಿಸಿತು. ಉತ್ತರಕಾಶಿಯಲ್ಲಿ ಮೇಘಸ್ಫೋಟಗೊಂಡ ನಂತರ ಧಾರಾಲಿ ಊರಿಗೆ ಹಾನಿಯಾದ ಚಿತ್ರಗಳನ್ನು ಉತ್ತರಾಖಂಡ ಪೊಲೀಸ್‌ ಇಲಾಖೆ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಚಿತ್ರವನ್ನು ಹೋಲುವ ಯಾವ ಚಿತ್ರವೂ ಅದರಲ್ಲಿಲ್ಲ. ಹಾಗಾಗಿ, ಎಐ ಚಿತ್ರವನ್ನು ಉತ್ತರಕಾಶಿಯಲ್ಲಿ ಸಂಘವಿಸಿದ ಮೇಘಸ್ಫೋಟಕ್ಕೆ ತಪ್ಪಾಗಿ ತಳಕು ಹಾಕಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT