ADVERTISEMENT

ಹಂಪಿ: ವಿಷ್ಣು ಮಂದಿರದ ಕಂಬ ಕೆಡವಿದ ಕಿಡಿಗೇಡಿಗಳಿಂದಲೇ ಅದನ್ನು ಪುನಸ್ಥಾಪಿಸಿದರು!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 9:33 IST
Last Updated 18 ಫೆಬ್ರುವರಿ 2019, 9:33 IST
   

ಬೆಂಗಳೂರು: ಹಂಪಿಯ ವಿಷ್ಣು ಮಂದಿರದ ಪರಿಸರದಲ್ಲಿನ ಕಲ್ಲಿನ ಕಂಬವೊಂದನ್ನು ಕೆಡವಿ ಹಾನಿ ಮಾಡಿದ ಕಿಡಿಗೇಡಿಗಳಿಂದಲೇ ದಂಡ ವಸೂಲಿ ಮಾಡಿಹಂಪಿ ಪುನರ್ ನಿರ್ಮಾಣ ಕಾರ್ಯ ನಡೆಸಲು ಹೊಸಪೇಟೆಯ ಜೆಎಂಎಫ್‍ಕೋರ್ಟ್ ಆದೇಶಿಸಿದೆ.

ಹಂಪಿ ಸ್ಮಾರಕಕ್ಕೆ ಹಾನಿ ಮಾಡಿದ ನಾಲ್ವರು ಕಿಡಿಗೇಡಿಗಳಿಗೆ ತಲಾ ₹70,000 ದಂಡ ವಿಧಿಸಿರುವ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಅದೇ ಕಂಬಗಳನ್ನು ಯಥಾಸ್ಥಿತಿಯಲ್ಲಿರಿಸುವಂತೆ ಆದೇಶಿಸಿದ್ದರು.ಅಷ್ಟೇ ಅಲ್ಲದೆ ಮತ್ತೊಮ್ಮೆ ಈ ರೀತಿ ಕಿಡಿಗೇಡಿ ಕೃತ್ಯ ಪುನರಾರ್ತನೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲು ಹೇಳಿದ್ದಾರೆ.

ADVERTISEMENT

ದೇವಾಲಯದ ಕಂಬಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸುವುದಾಗಿ ಹೇಳಿದ ಈ ಯುವಕರು ₹2.8 ಲಕ್ಷ ದಂಡ ಪಾವತಿಸಿ ಬಂಧಮುಕ್ತರಾಗಿದ್ದಾರೆ.

ಮಧ್ಯಪ್ರದೇಶದ ಆಯುಷ್, ರಾಜಾ ಬಾಬು ಚೌಧರಿ, ಬಿಹಾರದ ರಾಜ್ ಆರ್ಯನ್ ಮತ್ತು ರಾಜೇಶ್ ಕುಮಾರ್ ಎಂಬ ಯುವಕರು ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಂಬವನ್ನು ಕೆಡವಿದ್ದರು.ಕಂಬವನ್ನು ಕೆಡವುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಫೆಬ್ರುವರಿ 7ರಂದು ಇವರನ್ನು ಬಂಧಿಸಲಾಗಿತ್ತು.

ಈ ಯುವಕರನ್ನು ಅದೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಎಸ್ಐ ಅಧಿಕಾರಿಗಳ ಸಮ್ಮುಖದಲ್ಲಿ ಆ ಕಂಬಗಳನ್ನು ಮತ್ತೆ ನಿಲ್ಲಿಸಲು ಹೇಳಲಾಗಿತ್ತು.ಇಂಥಾ ಕೃತ್ಯಕ್ಕೆ ಗರಿಷ್ಠ 2 ವರ್ಷ ಜೈಲು ಮತ್ತು 1 ಲಕ್ಷದ ವರೆಗೆ ದಂಡ ವಿಧಿಸಲಾಗುತ್ತದೆ.ತಪ್ಪಿತಸ್ಥರು ದಂಡ ಪಾಪತಿ ಮಾಡದೇ ಇದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ದಂಡ ಪಾವತಿ ಮಾಡಿ, ಕೆಡವಿದ ಕಂಬವನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸಿದ ನಂತರವೇ ಈ ಯುವಕರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.