ADVERTISEMENT

ಅಣ್ಣಾ,ಬಾಬಾ ನಿರಶನ: ಆರ್‌ಎಸ್‌ಎಸ್ ಪಿತೂರಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ನವದೆಹಲಿ(ಪಿಟಿಐ): ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಹಿಂದೂ ಭಯೋತ್ಪಾದಕರೊಂದಿಗೆ ಹೊಂದಿರುವ ಬಾಂಧವ್ಯವನ್ನು ಮರೆಮಾಚಲಿಕ್ಕಾಗಿಯೇ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರ ಪ್ರತಿಭಟನೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹರಿಹಾಯ್ದಿದ್ದಾರೆ.

ಆರ್‌ಎಸ್‌ಎಸ್ ರೂಪಿಸಿದ್ದ ಯೋಜನೆ ಅನುಸಾರ ಮೂರು ವರ್ಗಗಳಿದ್ದವು. ಅವುಗಳಲ್ಲಿ ಅಣ್ಣಾ ಹಜಾರೆ `ಎ~ ವರ್ಗಕ್ಕೆ ಸೇರಿದ್ದರೆ, ಯೋಗುರು ಬಾಬಾ ರಾಮದೇವ್ `ಬಿ~ ಗುಂಪು ಮತ್ತು ಶ್ರೀ ಶ್ರೀ ರವಿಶಂಕರ್ `ಸಿ~ ಗುಂಪಿನಲ್ದ್ದ್‌ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಈ ಕುರಿತು ತಮ್ಮ ಟ್ವಿಟ್ಟರ್‌ನಲ್ಲಿ ವಿವರಿಸಿರುವ ಸಿಂಗ್, ಸಂಘದ ಈ ಯೋಜನಾಬದ್ಧ ಕುತಂತ್ರಗಳು ದೇಶದ ಜನರ ಗಮನವನ್ನು ಬೇರೆಡೆ ತಿರುಗಿಸಲಿಕ್ಕಾಗಿಯೇ ರೂಪಿಸಲಾದದ್ದು ಎಂಬ ಸಂಗತಿ ನಿಸ್ಸಂದೇಹ ಎಂದು ಪ್ರತಿಪಾದಿಸಿದ್ದಾರೆ.

ಸಂಘ ಪರಿವಾರವು ಮಾಲೆಗಾಂವ್ ಸ್ಫೋಟವನ್ನು ಒಳಗೊಂಡಂತೆ ಮಾದೋಸಾ, ಹೈದರಾಬಾದ್, ಅಜ್ಮೀರ್ ಷರೀಫ್ ಮತ್ತು ಸಮ್‌ಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ತನ್ನ ನಂಟನ್ನು ಹೊಂದಿತ್ತು. ಈ ನಿಜಾಂಶ ಬಯಲಾಗುತ್ತಿದ್ದಂತೆಯೇ ಆರ್‌ಎಸ್‌ಎಸ್ ಇಂತಹ ತಂತ್ರವನ್ನು ಹೆಣೆಯಿತು. ಈ ಮೂಲಕ ಜನರ ಮನಸ್ಸನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದ ಕಡೆ ತಿರುಗಿಸುವ ಪ್ರಯತ್ನ ನಡೆಸಿತು ಎಂದು ಸಿಂಗ್ ಹೇಳಿದ್ದಾರೆ.

ಅಭಿಪ್ರಾಯ ದಾಖಲಿಸಲು ಸ್ವತಂತ್ರರು: ದಿಗ್ವಿಜಯ್ ಸಿಂಗ್ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀ ಶ್ರೀ ರವಿಶಂಕರ್ ಅವರು, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸ್ವತಂತ್ರರಿದ್ದಾರೆ. ಇದಕ್ಕೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.