ADVERTISEMENT

ಅಳಿವಿನ ಅಂಚಿನಲ್ಲಿ ರಾಣೆಬೆನ್ನೂರು ಪಕ್ಷಿಧಾಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2014, 19:30 IST
Last Updated 15 ನವೆಂಬರ್ 2014, 19:30 IST

ಮುಂಬೈ: ಪಕ್ಷಿಪ್ರೇಮಿಗಳು, ಪರಿಸರ ಆಸಕ್ತರಿಗೆ ದಿಗಿಲು ಹುಟ್ಟಿಸುವಂತೆ ರಾಣೆಬೆನ್ನೂರು ಕೊಕ್ಕರೆಧಾಮವೂ ಸೇರಿ­ದಂತೆ ದೇಶದ 10 ಮಹತ್ವದ ಪಕ್ಷಿ­ಧಾಮ­ಗಳು ಅಳಿವಿನ ಅಂಚಿನಲ್ಲಿವೆ ಎಂಬ ಸಂಗತಿ ಯನ್ನು ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌) ಹಾಗೂ  ಬ್ರಿಟನ್‌ ಮೂಲದ ‘ಬರ್ಡ್‌ ಲೈಫ್‌ ಇಂಟರ್‌ನ್ಯಾಷನಲ್‌’ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯು­ತ್ತಿ­ರುವ ವಿಶ್ವ ಉದ್ಯಾನ ಸಮಾವೇಶದಲ್ಲಿ ‘ಬರ್ಡ್‌ ಲೈಫ್‌ ಇಂಟರ್‌ನ್ಯಾಷನಲ್‌’ ವರದಿ ಮಂಡಿಸಿದ್ದು, ಪ್ರಸ್ತುತ 122 ದೇಶಗಳ 12,000 ಪಕ್ಷಿಧಾಮಗಳ ಪೈಕಿ 356 ಪಕ್ಷಿಧಾಮಗಳು ನಾಶವಾಗುವ ಅಂಚಿಗೆ ಬಂದಿವೆ. ಭಾರತದಲ್ಲಿ ಪರಿಸರ ನಾಶದಿಂದಾಗಿ 10 ಪಕ್ಷಿಧಾಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅಭಿಪ್ರಾಯ ಪಟ್ಟಿದೆ. ಇವೆಲ್ಲ ಜೀವವೈವಿಧ್ಯ ತಾಣ­ವಾಗಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಆಸರೆಯ ತಾಣಗಳಾಗಿವೆ.

ಮೂಲಸೌಕರ್ಯ ಅಭಿವೃದ್ಧಿಯಿಂದ ಆದ ಪರಿಸರ ನಾಶ, ಜನರ ಹಿತಕ್ಕೆ ವಿರುದ್ಧ­ವಾದ ಸಂರಕ್ಷಣಾ ನೀತಿ, ಜಾನು­ವಾರು­ಗಳ ಮೇವಿಗೆ ಮಿತಿಮೀರಿ ಈ ತಾಣವನ್ನು ಬಳಸಿಕೊಂಡಿದ್ದು, ಔದ್ಯಮಿಕ ಮಾಲಿನ್ಯ, ಕೃಷಿಭೂಮಿ ವಿಸ್ತರಣೆ, ಕ್ರಿಮಿನಾಶಕಗಳ ಬಳಕೆ, ನಗರೀಕರಣ ಹಾಗೂ ಬೇಟೆ­ಯಿಂದಾಗಿ ಪಕ್ಷಿಧಾಮ­ಗಳು ಅಳಿವಿನಂಚಿಗೆ ಬಂದಿವೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.