ನವದೆಹಲಿ: ಉದ್ದೇಶಿತ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಕರಡಿಗೆ ಕೆಲವು ಮಾರ್ಪಾಡುಗಳನ್ನು ಮಾಡುವ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಜುಲೈ 18ರಂದು (ಬುಧವಾರ) ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಈ ಮಸೂದೆ ಜಾರಿಯಲ್ಲಿನ ವಿಳಂಬದ ವಿರುದ್ಧ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಡಪಕ್ಷಗಳು ಎಚ್ಚರಿಕೆ ನೀಡಿರುವ ಸಂದರ್ಭದಲ್ಲೇ ಪ್ರಧಾನಿ ಸಭೆ ನಡೆಸಲು ನಿರ್ಧರಿಸಿದ್ದಾರೆ.ಕೃಷಿ ಸಚಿವ ಶರದ್ ಪವಾರ್, ಆಹಾರ ಸಚಿವ ಕೆ.ವಿ.ಥಾಮಸ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರದ ಶೇ 70ರಷ್ಟು ಜನಸಂಖ್ಯೆಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಒದಗಿಸಬೇಕೆಂಬುದು ಕೇಂದ್ರದ ತೀರ್ಮಾನವಾಗಿದೆ. ಈ ಮುನ್ನ ಶೇ 64ರಷ್ಟು ಜನಸಂಖ್ಯೆಗೆ ಇದನ್ನು ನೀಡಲು ಉದ್ದೇಶಿಸಲಾಗಿತ್ತು. ಈ ಶೇ 70ರಷ್ಟು ಜನಸಂಖ್ಯೆ ವ್ಯಾಪ್ತಿಗೆ, ನಗರ ಪ್ರದೇಶದ ಬಡವರನ್ನು ಸೇರಿಸಬೇಕೋ, ಅಥವಾ ಗ್ರಾಮೀಣ ಪ್ರದೇಶದ ಬಡವರನ್ನು ಸೇರಿಸಬೇಕೋ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ರಾಜ್ಯ ಸರ್ಕಾರಗಳಿಗೇ ಬಿಡಲು ಕೂಡ ಕೇಂದ್ರ ನಿರ್ಧರಿಸಿದೆ.
ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಕುಟುಂಬವೊಂದಕ್ಕೆ ಗರಿಷ್ಠ 25 ಕೆ.ಜಿ. ಆಹಾರಧಾನ್ಯ (ಗೋಧಿ ಕೆ.ಜಿ.ಗೆ ರೂ 2, ಅಕ್ಕಿ ಕೆ.ಜಿ.ಗೆ ರೂ 3) ನೀಡುವ ಇರಾದೆ ಕೇಂದ್ರದ್ದು. ಇದಕ್ಕಾಗಿ ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ 1.20 ಲಕ್ಷ ಕೋಟಿ ರೂಪಾಯಿ ಬೇಕಾಗುತ್ತದೆ. ಈ ಮುಂಚಿನ ಲೆಕ್ಕಾಚಾರದ ಪ್ರಕಾರ ಬೇಕಿದ್ದ ಹಣ 1.09 ಲಕ್ಷ ಕೋಟಿ ರೂಪಾಯಿಗಳು.
ಸಬ್ಸಿಡಿ ಮೊತ್ತ ಹೆಚ್ಚಳವಾಗುತ್ತಾದರೂ, ಹಣಕಾಸು ಇಲಾಖೆ ಮತ್ತು ಯೋಜನಾ ಆಯೋಗ ಈಗಾಗಲೇ ಇದಕ್ಕೆ ಒಪ್ಪಿಗೆ ಸೂಚಿಸಿವೆ. ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಲಿ ಕೂಡ ಈ ಪ್ರಸ್ತಾವಕ್ಕೆ ಸಮ್ಮತಿ ನೀಡಿದೆ.ಹೊಸ ಪ್ರಸ್ತಾವದ ಪ್ರಕಾರ, ರಾಷ್ಟ್ರದ 250 ಹಿಂದುಳಿದ ಜಿಲ್ಲೆಗಳ ಶೇ 90ರಷ್ಟು ಜನರಿಗೆ ಸಬ್ಸಿಡಿ ದರದ ಪಡಿತರ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.