ADVERTISEMENT

ಆಹಾರ ಹಣದುಬ್ಬರ ದರ ಅಲ್ಪ ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 11:40 IST
Last Updated 14 ಜನವರಿ 2011, 11:40 IST

ನವದೆಹಲಿ (ಪಿಟಿಐ): ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಜನವರಿ 1ಕ್ಕೆ ಅಂತ್ಯಗೊಂಡಂತೆ ಆಹಾರ ಹಣದುಬ್ಬರ ದರವು ಅಲ್ಪ ಮಟ್ಟಿಗಿನ ಇಳಿಕೆ ಮಾತ್ರ ದಾಖಲಿಸಿದೆ. ಕಳೆದ ತಿಂಗಳು ಶೇಕಡ 18.32ರಷ್ಟಿದ್ದ ದರವು ಈಗ ಶೇ 16.91ರಷ್ಟಾಗಿದೆ.

ಈರುಳ್ಳಿ ಸೇರಿದಂತೆ ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡಿದ್ದರಿಂದ ಅಕ್ಟೋಬರ್‌ನಲ್ಲಿ ಶೇಕಡ 7.48ರಷ್ಟಿದ್ದ ಒಟ್ಟಾರೆ ಹಣದುಬ್ಬರ ದರ ಡಿಸೆಂಬರ್‌ನಲ್ಲಿ ಶೇ 8.5ಕ್ಕೆ ಏರಿತ್ತು. ಕೈಗಾರಿಕಾ ವೃದ್ಧಿ ದರವೂ ನವೆಂಬರ್‌ನಲ್ಲಿ ಕಳೆದ ಹದಿನೆಂಟು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 25ಕ್ಕೆ ಪ್ರಕಟಿಸಲಿರುವ ತೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಹೆಚ್ಚಿಸುವ ಸಾಧ್ಯತೆಗಳಿವೆ.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಈರುಳ್ಳಿ ಮತ್ತು ತರಕಾರಿಗಳ ಬೆಲೆ ಕ್ರಮವಾಗಿ ಶೇ 1.73 ಮತ್ತು ಶೇ 3.84ರಷ್ಟು ಹೆಚ್ಚಳವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ತರಕಾರಿ ಬೆಲೆ ಕ್ರಮವಾಗಿ ಶೇ 70ರಷ್ಟು ಏರಿಕೆಯಾಗಿದೆ. ಮೊಟ್ಟೆ, ಮಾಂಸ ಮತ್ತು ಮೀನು ಕೂಡ ತುಟ್ಟಿಯಾಗಿದ್ದು, ಶೇ 16, 13 ಮತ್ತು ಶೇ 17ರಷ್ಟು ಹೆಚ್ಚಳವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.