ADVERTISEMENT

ಇಲ್ಲ ಮಂತ್ರದಂಡ, ಸರಿಯಲ್ಲ ಉಪವಾಸ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2011, 9:45 IST
Last Updated 15 ಆಗಸ್ಟ್ 2011, 9:45 IST
ಇಲ್ಲ ಮಂತ್ರದಂಡ, ಸರಿಯಲ್ಲ ಉಪವಾಸ: ಪ್ರಧಾನಿ
ಇಲ್ಲ ಮಂತ್ರದಂಡ, ಸರಿಯಲ್ಲ ಉಪವಾಸ: ಪ್ರಧಾನಿ   

ನವದೆಹಲಿ (ಪಿಟಿಐ): ಭ್ರಷ್ಟಾಚಾರವನ್ನು ಬುಡಸಹಿತವಾಗಿ ಕಿತ್ತುಹಾಕಲು  ತಮ್ಮ ಬದ್ಧತೆಯನ್ನು ಸೋಮವಾರ ಇಲ್ಲಿ ಪುನರುಚ್ಚರಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ~ಆದರೆ ಭ್ರಷ್ಟಾಚಾರ ನಿಗ್ರಹಕ್ಕೆ ತಮ್ಮ ಬಳಿ ಯಾವುದೇ ಮಂತ್ರದಂಡವಿಲ್ಲ~ ಎಂದು ಹೇಳಿದರು.

~ಈ ಉದ್ದೇಶ ಸಾಧನೆಗೆ ಮಾರ್ಗವಾಗಿ ಉಪವಾಸ ಸತ್ಯಾಗ್ರಹಗಳನ್ನು ನಡೆಸುವುದನ್ನು ಸರಿಯಲ್ಲ~ ಎಂದು ಹೇಳುವ ಮೂಲಕ ಅಣ್ಣಾ ಹಜಾರೆಯವರು ಮಂಗಳವಾರ ಆರಂಭಿಸಲು ಉದ್ದೇಶಿಸಿರುವ ಅನಿರ್ದಿಷ್ಟ ನಿರಶನವನ್ನು ಪರೋಕ್ಷವಾಗಿ ದೂಷಿಸಿದರು.

65ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಚಾರಿತ್ರಿಕ ಕೆಂಪುಕೋಟೆಯಲ್ಲಿ ಸತತ 8ನೇ ವರ್ಷ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು ~ರಾಷ್ಟದ ಪರಿವರ್ತನೆಯಲ್ಲಿ ಭ್ರಷ್ಟಾಚಾರ ಒಂದು ದೊಡ್ಡ ಅಡಚಣೆಯಾಗಿದೆ. ಆದರೆ ಅದನ್ನು ರಾಷ್ಟ್ರೀಯ ಪ್ರಗತಿ ಸಾಧನೆಗೆ ಅಡ್ಡಿಯಾಗದಂತಹ ಪರಿಸರದಲ್ಲಿ ಚರ್ಚಿಸಬೇಕು~ ಎಂದು ಹೇಳಿದರು.

ತಮ್ಮ ಸರ್ಕಾರದ ಮೇಲೆ ಸಕಲ ದಿಕ್ಕುಗಳಿಂದಲೂ ದಾಳಿ ನಡೆಯುತ್ತಿರುವ ~ಭ್ರಷ್ಟಾಚಾರ~ ಕುರಿತೇ ತಮ್ಮ 40 ನಿಮಿಷಗಳ ಭಾಷಣದಲ್ಲಿ ಪ್ರಮುಖವಾಗಿ ಪ್ರಧಾನಿ ಪ್ರಸ್ತಾಪಿಸಿದರು.

ಈ ಸಮಸ್ಯೆ ಹಲವು ರೂಪಗಳನ್ನು ಪಡೆದುಕೊಂಡಿದೆ ಎಂದು ಹೇಳಿದ ~ಅವರು ಹಲವಾರು ಬಾರಿ ಜನರ ಅಭಿವೃದ್ಧಿಗಾಗಿ ಮೀಸಲಿರಿಸಿದ ಹಣ ಸರ್ಕಾರಿ ಅಧಿಕಾರಿಗಳ ಕಿಸೆ ಸೇರುತ್ತದೆ ಎಂಬುದು ನಿಜ~ ಎಂದು ಒಪ್ಪಿಕೊಂಡರು.

ಉನ್ನತ ಸ್ಥಾನಗಳಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸುವ ಸಲುವಾಗಿ ಪ್ರಬಲ ಲೋಕಪಾಲ ಮಸೂದೆ ಬೇಕೆಂಬುದು ಸರ್ಕಾರದ ನಿಲುವು. ಈ ಸಂಬಂಧಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಅಣ್ಣಾ ಹಜಾರೆ ಅವರ ಹೆಸರನ್ನಾಗಲೀ ಮತ್ತು ಅವರು ಮಂಗಳವಾರ ಆರಂಭಿಸಲಿರುವ ಸತ್ಯಾಗ್ರಹವನ್ನಾಗಲೀ ಪ್ರಸ್ತಾಪ ಮಾಡದ ಸಿಂಗ್, ಲೋಕಪಾಲ ಮಸೂದೆಯ ಕೆಲವು ಅಂಶಗಳ ಬಗ್ಗೆ ಕೆಲವರಿಗೆ ಪ್ರತ್ಯೇಕ ಅಭಿಪ್ರಾಯಗಳು ಇವೆ ಎಂಬುದು ಎಂಬುದು ತಮಗೆ ಗೊತ್ತಿದೆ ಎಂದು ಅವರು ನುಡಿದರು.

~ಈ ಮಸೂದೆಯನ್ನು ಒಪ್ಪದವರು ತಮ್ಮ ಅಭಿಪ್ರಾಯಗಳನ್ನು ಸಂಸತ್ತು, ರಾಜಕೀಯ ಪಕ್ಷಗಳು ಅಥವಾ ಪತ್ರಿಕಾ ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಬಹುದು. ಆದರೆ ಅವರು ಉಪವಾಸ ಮುಷ್ಕರ, ಆಮರಣ ನಿರಶನದಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದು ನಾನು ನಂಬುವೆ~ ಎಂದು ಪ್ರಧಾನಿ ಹೇಳಿದರು.

ಎಂತಹ ಲೋಕಪಾಲ ಮಸೂದೆಯನ್ನು ರಚಿಸಬೇಕು ಎಂಬುದನ್ನು ಸಂಸತ್ತು ಮಾತ್ರವೇ ನಿರ್ಧರಿಸಬಲ್ಲುದು. ಭ್ರಷ್ಟಾಚಾರವನ್ನು ನಿಭಾಯಿಸುವಂತಹ ಯಾವುದೇ ~ಮಂತ್ರದಂಡ~ ಸರ್ಕಾರದ ಬಳಿ ಇಲ್ಲ.

ನಮಗೆ ಕಂಡು ಬಂದ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಧ್ಯವಿರುವ ಎಲ್ಲ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ~ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.