ADVERTISEMENT

ಈ ವರ್ಷವೂ ಸಾಮಾನ್ಯ ಮುಂಗಾರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST

ನವದೆಹಲಿ (ಪಿಟಿಐ):  ದೇಶದಲ್ಲಿ ಸತತ ಎರಡನೇ ವರ್ಷವಾದ ಈ ಬಾರಿಯೂ ಸಾಮಾನ್ಯ ಮುಂಗಾರು ಬೀಳುವ ಮುನ್ಸೂಚನೆ ದೊರೆತಿದ್ದು, ಲಕ್ಷಾಂತರ ರೈತರಲ್ಲಿ ಉತ್ತಮ ಬೆಳೆಯ ಭರವಸೆ ಮೂಡಿಸಿದೆ. ‘ಈವರೆಗೆ ಚಿಂತಿಸಬೇಕಾದ ಯಾವುದೇ ಲಕ್ಷಣ ಕಂಡುಬಂದಿಲ್ಲ’ ಎಂದು ಮುಖ್ಯ ಹವಾಮಾನ ಮುನ್ಸೂಚಕ ಹಾಗೂ ರಾಷ್ಟ್ರೀಯ ಹವಾಮಾನ ಕೇಂದ್ರದ ನಿರ್ದೇಶಕ ಡಿ.ಶಿವಾನಂದ ಪೈ ತಿಳಿಸಿದ್ದಾರೆ.
 
ಸಮಭಾಜಕ ವೃತ್ತ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿನ ಅತ್ಯಂತ ತಂಪಾದ ವಾತಾವರಣದಿಂದ ಉದ್ಭವಿಸುವ ‘ಲಾ ನಿನಾ’ ಹವಾಮಾನ ವಿದ್ಯಮಾನವು ಜೂನ್‌ವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಇದರಿಂದ ನೈರುತ್ಯ ಮುಂಗಾರಿಗೆ ಅನುಕೂಲವಾಗಲಿದೆ. ‘ಲಾ ನಿನಾ’ಗೆ ವಿರುದ್ಧವಾದ ‘ಎಲ್ ನಿನೊ’ ಎಂಬ ಹವಾಮಾನ ವಿದ್ಯಮಾನವು 2009ರ ಭೀಕರ ಬರಗಾಲಕ್ಕೆ ಕಾರಣವಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯ ಮುಂಗಾರಿನಿಂದ 235 ದಶಲಕ್ಷ ರೈತರಿಗೆ ಅನುಕೂಲವಾಗಲಿದೆ. ಬತ್ತ, ಕಬ್ಬು, ಸೋಯಾಬೀನ್, ಜೋಳ ಬಿತ್ತನೆಗೆ ನೆರವಾಗಿ ಅಧಿಕ ಇಳುವರಿಗೆ ಕಾರಣವಾಗಲಿದೆ. ಕಳೆದ ವರ್ಷ ದೇಶದ 597 ಹವಾಮಾನ ಜಿಲ್ಲೆಗಳಲ್ಲಿ 413ರಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಬಿದ್ದಿತ್ತು. ಮೂರನೇ ಒಂದು ಭಾಗದಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡುಬಂದಿದ್ದು, 11 ಜಿಲ್ಲೆಗಳಲ್ಲಿ ಅತ್ಯಲ್ಪ ಮಳೆಯಾಗಿತ್ತು.

ಮುಂಗಾರಿನ ಬಗ್ಗೆ ಒಮ್ಮತ ಮುನ್ನೋಟ ಸಿದ್ಧಪಡಿಸಲು ಪ್ರಾಂತೀಯ ದೇಶಗಳ ಹವಾಮಾನ ಕಚೇರಿ ಪ್ರತಿನಿಧಿಗಳನ್ನು ಒಳಗೊಂಡ ‘ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆ’ ಈ ತಿಂಗಳ ಕೊನೆಯಲ್ಲಿ ಪುಣೆಯಲ್ಲಿ ಸೇರಲಿದೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ)‘ಮುಂಗಾರು ಮುನ್ನೋಟ’ ಸಹ ಈ ತಿಂಗಳ ಕೊನೆ ಭಾಗದಲ್ಲಿ ಬಿಡುಗಡೆಯಾಗುವ   ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.