ADVERTISEMENT

ಉತ್ತರಪ್ರದೇಶದಲ್ಲಿ ಒಳಮೀಸಲಾತಿಯೇ ಪ್ರಧಾನ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

 ನವದೆಹಲಿ (ಪಿಟಿಐ): ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ನೀಡುವ ಕೇಂದ್ರ ಸರ್ಕಾರದ ವಿವಾದಾತ್ಮಕ ನಿರ್ಧಾರದಿಂದಾಗಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಉತ್ತರಪ್ರದೇಶದಲ್ಲಿ ಮಹತ್ವದ ಮುಸ್ಲಿಂ ಮತಗಳನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿವೆ.

ಇದರಲ್ಲಿ ಮುಖ್ಯವಾಗಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಈ ವಿಷಯವನ್ನು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಲು ಬಳಸಿದ್ದು, `ಒಳಮೀಸಲಾತಿಯು ಎಲ್ಲ ಅಲ್ಪಸಂಖ್ಯಾತರಿಗೂ ಒಳಪಡುತ್ತದೆಯೇ ಹೊರತು ಮುಸ್ಲಿಮರಿಗೆ ಮಾತ್ರವಲ್ಲ ಹಾಗೂ ಇದನ್ನು ಬೆನ್ನಿಗೆ ಚೂರಿ ಹಾಕಲು ಬಳಸಿಕೊಳ್ಳಲಾಗಿದೆ~ ಎಂದು ಟೀಕಿಸಿದ್ದಾರೆ.

 ಅವರು ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಅವರಿಗೆ ಪತ್ರ ಬರೆದು, `ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರವು ಮುಸ್ಲಿಮರನ್ನು ವಂಚಿಸಲು ಸಾಚಾರ್ ಸಮಿತಿ ಮತ್ತು ರಂಗನಾಥ ಮಿಶ್ರಾ ಆಯೋಗವನ್ನು ರಚಿಸಿದೆಯೇ ಹೊರತು ಅವುಗಳ ಶಿಫಾರಸುಗಳನ್ನು ಜಾರಿಗೊಳಿಸುವುದಕ್ಕಲ್ಲ~ಎಂದು ಆರೋಪಿಸಿದ್ದಾರೆ. “ನಮ್ಮ ಪಕ್ಷವು ಅತ್ಯಂತ ಪ್ರಾಮಾಣಿಕವಾಗಿ ಈ ವಿಷಯದಲ್ಲಿ ಹೋರಾಡಿ ನ್ಯಾಯ ದೊರಕಿಸುತ್ತದೆ” ಎಂದೂ ಅವರು ಭರವಸೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರ ಬೆಂಬಲವನ್ನು ಮರಳಿ ಪಡೆಯಲು ಸೂಚಿಸಿ ತಮಗೆ ಶಾಹಿ ಇಮಾಮ್ ಕಳುಹಿಸಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮುಲಾಯಂ ಈ ರೀತಿ ಉತ್ತರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ಮುಸ್ಲಿಮರು ಮತ ಹಾಕಲು ಕಾರಣವೇನೆಂಬುದನ್ನು ಕಂಡುಕೊಳ್ಳುವಂತೆ ಇಮಾಮ್ ಕಳೆದ ತಿಂಗಳು ಬರೆದ ಪತ್ರದಲ್ಲಿ ಮುಲಾಯಂಗೆ ತಿಳಿಸಿದ್ದರು.

“ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸಬೇಕು ಎಂಬುದಕ್ಕೆ ತಾವು ಬದ್ಧವಾಗಿದ್ದು, ಕೇರಳ ಮತ್ತು ಆಂಧ್ರಪದೇಶದಲ್ಲಿ ನೀಡಿರುವಂತೆ ಈ ಮೀಸಲಾತಿ ಕಲ್ಪಿಸಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೇರಾವ ಪಕ್ಷವೂ ನೀಡಿರದ ಪ್ರಮಾಣದಲ್ಲಿ ಮೀಸಲಾತಿ ಒದಗಿಸಲು ಪ್ರಯತ್ನಿಸುತ್ತದೆ” ಎಂದು ಮುಲಾಯಂ ಹೇಳಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಕಾನೂನು ಪರಿಣತರು, ಬುದ್ಧಜೀವಿಗಳು ಮತ್ತು ಸಾಮಾಜಿಕ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.
ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ಮುಸ್ಲಿಮರ ಜನಸಂಖ್ಯೆಯ ಸುಮಾರು ಶೇ 18ರಷ್ಟು ಉತ್ತರಪ್ರದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.