ADVERTISEMENT

ಎನ್‌ಡಿಎ ತೊರೆದ ಜೆಡಿಯು

11 ಬಿಜೆಪಿ ಸಚಿವರ ವಜಾ * 19ರಂದು ವಿಶ್ವಾಸ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST
ಎನ್‌ಡಿಎ ಸಖ್ಯ ತೊರೆಯುವ ಘೋಷಣೆಯನ್ನು ಪಟ್ನಾದಲ್ಲಿ ಭಾನುವಾರ ಮಾಡಿದ ಬಳಿಕ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಹೀಗೆ ಕಾಣಿಸಿಕೊಂಡರು
ಎನ್‌ಡಿಎ ಸಖ್ಯ ತೊರೆಯುವ ಘೋಷಣೆಯನ್ನು ಪಟ್ನಾದಲ್ಲಿ ಭಾನುವಾರ ಮಾಡಿದ ಬಳಿಕ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಧ್ಯಮಗಳ ಮುಂದೆ ಹೀಗೆ ಕಾಣಿಸಿಕೊಂಡರು   

ಪಟ್ನಾ: ಸಂಯುಕ್ತ ಜನತಾ ದಳವು (ಜೆಡಿಯು) ಎನ್‌ಡಿಎ ಸಖ್ಯವನ್ನು ಭಾನುವಾರ ತೊರೆಯುವ ಮೂಲಕ ಒಂದು ವಾರದಿಂದ ಅನಿಶ್ಚಿತವಾಗಿದ್ದ ನಿರ್ಧಾರಕ್ಕೆ ಅಧಿಕೃತವಾಗಿ ಮುದ್ರೆಯೊತ್ತಿದೆ. ಮೈತ್ರಿಕೂಟದ ಜೊತೆಗಿನ 17 ವರ್ಷಗಳ ಗೆಳೆತನಕ್ಕೆ ಮಂಗಳ ಹಾಡಿದೆ. ಮಾತ್ರವಲ್ಲದೆ, ಬಿಹಾರದ ಸಂಪುಟದಲ್ಲಿದ್ದ ಬಿಜೆಪಿ 11 ಸಚಿವರನ್ನು ವಜಾ ಮಾಡಲಾಗಿದೆ.  ಸರ್ಕಾರ ಇದೇ 19ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಲು ತೀರ್ಮಾನಿಸಿದೆ.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು ಎನ್‌ಡಿಎ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭಾ ಚುನಾವಣೆಗೂ ಮೊದಲೇ ತೀವ್ರ ಹಿನ್ನಡೆ ಉಂಟಾಗಿದೆ. ಈಗ ಎನ್‌ಡಿಎ ಮೈತ್ರಿಕೂಟದಲ್ಲಿ  ಬಿಜೆಪಿ, ಶಿವಸೇನೆ ಮತ್ತು ಅಕಾಲಿ ದಳ ಮಾತ್ರ ಉಳಿದುಕೊಂಡಿವೆ. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೂ ಮೊದಲೇ ಬಿಜೆಡಿಯು ಎನ್‌ಡಿಎ ಕೂಟದಿಂದ ಹೊರಬಂದಿತ್ತು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹೊಣೆ ವಹಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಜೆಡಿಯು, ಬಿಜೆಪಿ ನಿರ್ಧಾರಕ್ಕೆ ಪ್ರತಿಭಟನೆಯಾಗಿ ಈ ಕಠಿಣ ನಿಲುವು ಕೈಗೊಂಡಿದೆ. ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಎನ್‌ಡಿಎ ತೊರೆಯುವ ನಿರ್ಧಾರ ಪ್ರಕಟಿಸಿದರು.

`ಪಕ್ಷದ ಮೂಲ ತತ್ವ, ಸಿದ್ಧಾಂತದ ವಿಚಾರದಲ್ಲಿ  ನಾವು ರಾಜಿ ಮಾಡಿಕೊಳ್ಳಲಾರೆವು. ಈ ನಿರ್ಧಾರದಿಂದ ಎದುರಾಗುವ ಯಾವುದೇ ಸನ್ನಿವೇಶವೂ ಪಕ್ಷಕ್ಕೆ ಧಕ್ಕೆಯುಂಟು ಮಾಡುವುದಿಲ್ಲ. ಈ ಬಗ್ಗೆ ನಾವು ಚಿಂತಿಸುವುದೂ ಇಲ್ಲ. ಸದ್ಯದ ಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳದೆ ಬೇರೆ ದಾರಿ ಇರಲಿಲ್ಲ. ಮೈತ್ರಿಕೂಟದಲ್ಲಿನ ಸನ್ನಿವೇಶವು ಇಂತಹ ನಿಲುವು ಕೈಗೊಳ್ಳುವ ಒತ್ತಡ ಉಂಟುಮಾಡಿತು. ಬಿಹಾರದಲ್ಲಿ (ಸರ್ಕಾರಕ್ಕೆ) ಯಾವುದೇ ತೊಂದರೆ ಆಗುವುದಿಲ್ಲ' ಎಂದು ಈ ಇಬ್ಬರು ಮುಖಂಡರು ಹೇಳಿದರು.

`ಈಗ ಬಿಜೆಪಿ ಹೊಸ ಆಯಾಮದಲ್ಲಿ ಮುಂದುವರಿಯಲು ಬಯಸಿದೆ. ಎಲ್ಲಿಯವರೆಗೆ ಬಿಹಾರದಲ್ಲಿ ಬೇರೆಯವರ ಹಸ್ತಕ್ಷೇಪ ಇರಲಿಲ್ಲವೋ ಅಲ್ಲಿಯವರೆಗೆ ಬಿಜೆಪಿ ಜೊತೆಗಿನ ಒಡನಾಟ ಸುಗಮವಾಗಿಯೇ ಇತ್ತು.ಎನ್‌ಡಿಎ ತೊರೆದ ಜೆಡಿಯು ಆದರೆ, ಯಾವಾಗ ಅನ್ಯರು ಮೂಗು ತೂರಿಸುವ ಸನ್ನಿವೇಶ ಎದುರಾಯಿತೋ ಆಗ ಸಮಸ್ಯೆ ಕಾಣಿಸಲು ಶುರುವಾಯಿತು' ಎಂದು ನಿತೀಶ್ ಹೇಳಿದರು.

`ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿಯೇ ಟೀಕಿಸುತ್ತಿರುವಿರಾ' ಎಂಬ ಪ್ರಶ್ನೆಗೆ ಉತ್ತರಿಸಿದ ನಿತೀಶ್, `ಅರ್ಥ ಮಾಡಿಕೊಳ್ಳುವವರಿಗೆ ಇದು ಗೊತ್ತಾಗುತ್ತದೆ. ಅರ್ಥವಾಗದವರು ಮುಗ್ಧರು' ಎಂದರು. ಸುಮಾರು ಒಂದೂವರೆ ತಾಸು ನಡೆದ ಸುದ್ದಿಗೋಷ್ಠಿಯಲ್ಲಿ ನರೇಂದ್ರ ಮೋದಿ ಅವರ ಹೆಸರನ್ನು ನಿತೀಶ್ ಅಪ್ಪಿತಪ್ಪಿಯೂ ಉಲ್ಲೇಖಿಸಲಿಲ್ಲ.

`ಈ ಹಿಂದೆ ಅರುಣ್ ಜೇಟ್ಲಿ ಮತ್ತು ದಿವಂಗತ ಪ್ರಮೋದ್ ಮಹಾಜನ್ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಹೊಣೆ ಹೊತ್ತಿದ್ದರು. ಆಗ ಇಂತಹ ಸಮಸ್ಯೆಯೇನೂ ಆಗಿರಲಿಲ್ಲ' ಎಂದರು. `ಕೇಂದ್ರದಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬರುವ ಕಾಲ ಎಂದೋ ಹೋಯಿತು. ನೀವು (ಬಿಜೆಪಿ) ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಬಯಸಿದ್ದರೆ, ಯಾರನ್ನೋ ಪ್ರಧಾನಿಯನ್ನಾಗಿ ಮಾಡಿದರೆ ಆಗದು. ಯಾರದ್ದೋ ಪರ ಅಲೆ ಇದೆ ಎಂದುಕೊಂಡರೆ ಅದು ತಪ್ಪು ತಿಳಿವಳಿಕೆಯಾದೀತು' ಎಂದು ನಿತೀಶ್ ಚುಚ್ಚಿದರು.

`ಎನ್‌ಡಿಎಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಇರಾದೆ ಇದ್ದರೆ ಹೊಸ ಮೈತ್ರಿಯನ್ನು ಸಾಧಿಸಿಕೊಳ್ಳಬೇಕು' ಎಂದೂ ನಿತೀಶ್ ಸಲಹೆ ನೀಡಿದರು. `ಮೋದಿ ಅವರಿಗೆ ಪ್ರಮುಖ ಹುದ್ದೆ ನೀಡಿದ್ದು, ಆ ಪಕ್ಷದ ಆಂತರಿಕ ವಿಷಯ ಅಂತ ನಾವು ಸುಮ್ಮನಿದ್ದೆವು. ನಂತರದಲ್ಲಿ ಬಿಜೆಪಿ ಮುಖಂಡರು ನೀಡಿದ ಹೇಳಿಕೆ, ಮಾಡಿದ ಭಾಷಣಗಳನ್ನು ಗಮನಿಸಿದಾಗ ಅವರು ಮೈತ್ರಿಕೂಟದ ರಾಷ್ಟ್ರೀಯ ಕಾರ್ಯಸೂಚಿಯ ಪರಿಧಿಯಿಂದ ಹೊರಹೋಗುತ್ತಿರುವುದು ಭಾಸವಾಯಿತು' ಎಂದು ಶರದ್ ಯಾದವ್ ಹೇಳಿದರು.

`ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರ ನಾಯಕತ್ವದಲ್ಲಿ ದೊರಕಿದ್ದ ವಿಶ್ವಾಸಕ್ಕೆ ಭಿನ್ನವಾದ ವಿಷಯಗಳು ಮತ್ತು ಸಮಸ್ಯೆಗಳು ಈಗ ಎದುರಾಗಿವೆ' ಎಂದರು. 

11 ಸಚಿವರು ವಜಾ: ಬಿಹಾರದಲ್ಲಿ ಎಂಟು ವರ್ಷಗಳಿಂದ ನಿತೀಶ್ ಕುಮಾರ್ ಅವರ ಸರ್ಕಾರಕ್ಕೆ ಹೆಗಲು ಕೊಟ್ಟಿದ್ದ ಬಿಜೆಪಿಯ ಮೈತ್ರಿಯನ್ನು ಮುರಿದಿರುವ ಜೆಡಿಯು, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಆ ಪಕ್ಷದ 11 ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಸಂಪುಟದಿಂದ ವಜಾ ಮಾಡಿದೆ. ಈ ಬೆಳವಣಿಗೆಯಿಂದ ನಿತೀಶ್ ಅವರ ಸರ್ಕಾರಕ್ಕೆ ಧಕ್ಕೆ ಆಗುವುದಿಲ್ಲ ಎನ್ನಲಾಗಿದೆ.

ಸಂಪುಟದಿಂದ ಬಿಜೆಪಿ ಸಚಿವರನ್ನು ವಜಾ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ನಿತೀಶ್, `ಬಿಜೆಪಿ ಸಚಿವರು ಕಾರ್ಯನಿರ್ವಹಣೆ ಸ್ಥಗಿತ ಮಾಡಿದ್ದಾರೆಂಬ ವರದಿಗಳು ಮಾಧ್ಯಮದಲ್ಲಿ ಬರತೊಡಗಿದವು. ಸಂಪುಟದ ಸಭೆಗೂ ಅವರು ಬರುತ್ತಿರಲಿಲ್ಲ. ಸಚಿವರು ಕಾರ್ಯನಿರ್ವಹಣೆ ನಿಲ್ಲಿಸುವುದು ಮತ್ತು ರಾಜೀನಾಮೆ ನೀಡುವುದು ಬೇರೆ ಬೇರೆ ವಿಷಯಗಳು. ಬಿಜೆಪಿಯ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ರಾಜ್ಯಪಾಲ ಡಿ.ವೈ. ಪಾಟೀಲ್ ಅವರಿಗೆ ಶಿಫಾರಸು ಮಾಡಿದ್ದೆ. ಅದನ್ನು ಅವರು ಒಪ್ಪಿದ್ದಾರೆ. ವಿಶ್ವಾಸ ಮತ ಕೋರಲು ವಿಶೇಷ ಅಧಿವೇಶನ ಕರೆಯುವಂತೆಯೂ ಕೋರಿದ್ದೇನೆ' ಎಂದರು.

`ಹಿರಿಯ ಸಚಿವರೂ, ಬಿಜೆಪಿ ಮುಖಂಡರೂ ಆದ ಸುಶೀಲ್ ಕುಮಾರ್ ಮೋದಿ ಮತ್ತು ನಂದಕಿಶೋರ್ ಯಾದವ್ ಅವರಿಗೆ ಮೈತ್ರಿ ಕೈಬಿಡುವ ಬಗ್ಗೆ ಸೌಹಾರ್ದವಾಗಿಯೇ ಚರ್ಚಿಸಲು ಭೇಟಿ ಮಾಡೋಣ ಅಂತ ಹೇಳಿದ್ದೆ. ಆದರೆ, ಅವರು ಇದಕ್ಕೆ ಸ್ಪಂದಿಸಲಿಲ್ಲ' ಎಂದರು.
ಹಿನ್ನೆಲೆ: ಕಳೆದ ವಾರ ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ‌್ಯಕಾರಿಣಿಯಲ್ಲಿ ನರೇಂದ್ರ ಮೋದಿ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ADVERTISEMENT

ಬಿಜೆಪಿ ತನ್ನ ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಘೋಷಿಸಲು ಎನ್‌ಡಿಎ ಅಂಗಪಕ್ಷಗಳು ನೀಡಿದ್ದ ಡಿಸೆಂಬರ್ ತಿಂಗಳ ಗಡುವಿಗೆ ಮುನ್ನ ಈ ಮಹತ್ವದ ಬೆಳೆವಣಿಗೆ ನಡೆಯಿತು. ಇದರಿಂದ ಜೆಡಿಯು ಸಿಟ್ಟಿಗೆದ್ದಿತು. ಈ ಮಧ್ಯೆ, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ನಡುವೆ ಶೀತಲ ಸಮರ ಮುಂದುವರಿದೇ ಇತ್ತು. ಅಡ್ವಾಣಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೋದಿ ಅವರು ಹಾಜರಿರುತ್ತಾರೆ ಎಂಬ ಕಾರಣಕ್ಕೆ ನಿತೀಶ್ ಕಳೆದ ಮೂರು ವರ್ಷಗಳಿಂದ ಇಂತಹ ಔತಣಕೂಟಕ್ಕೆ ಗೈರು ಹಾಜರಿದ್ದರು. ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಮೋದಿ ರಾಜ್ಯಕ್ಕೆ ಕಾಲಿಡದಂತೆ ತಡೆಯುವಲ್ಲಿ ನಿತೀಶ್ ಯಶಸ್ವಿಯಾಗಿದ್ದರು.

ವಿಶ್ವಾಸದ್ರೋಹ: ಬಿಜೆಪಿ
ಎನ್‌ಡಿಎ ತೊರೆಯುವ ಮತ್ತು ಸಂಪುಟದಿಂದ 11 ಸಚಿವರನ್ನು ವಜಾ ಮಾಡಿದ ಜೆಡಿಯು ನಿರ್ಧಾರವನ್ನು ಬಿಹಾರದ ಜನತೆಗೆ ಬಗೆದ ವಿಶ್ವಾಸದ್ರೋಹ ಎಂದು ಬಿಜೆಪಿ ಟೀಕಿಸಿದೆ. ಜೊತೆಗೆ ಮಂಗಳವಾರ (ಜೂನ್ 18) ಬಿಹಾರ ಬಂದ್‌ಗೆ ಕರೆ ನೀಡಿದ್ದು, `ವಿಶ್ವಾಸಘಾತ ದಿವಸ' ಆಚರಿಸುವಂತೆ ಮನವಿ ಮಾಡಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆಗೂ ಆಗ್ರಹಿಸಿದೆ.

`ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ಶಾಸಕಾಂಗ ಪಕ್ಷದ ನಾಯಕರು ಮಾತ್ರವಲ್ಲ, ಎನ್‌ಡಿಎ ನಾಯಕರಾಗಿಯೂ ಆಯ್ಕೆಯಾದವರು. ಈಗ ಅವರು ಭಿನ್ನ ಹಾದಿ ತುಳಿದಿದ್ದಾರೆ. ಆದ್ದರಿಂದ ಅವರು ಮೊದಲು ನೈತಿಕವಾಗಿ ರಾಜೀನಾಮೆ ನೀಡಬೇಕು' ಎಂದು ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.