ADVERTISEMENT

ಏ. 7ರಿಂದ ರಾಷ್ಟ್ರವ್ಯಾಪಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಏ. 7ರಿಂದ ರಾಷ್ಟ್ರವ್ಯಾಪಿ ಮುಷ್ಕರ
ಏ. 7ರಿಂದ ರಾಷ್ಟ್ರವ್ಯಾಪಿ ಮುಷ್ಕರ   

ಬೆಂಗಳೂರು: ವಾಹನಗಳ ವಿಮೆ ಕಂತಿನ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ‘ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ’ ರಾಷ್ಟ್ರದಾದ್ಯಂತ ಏಪ್ರಿಲ್ 7ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, ‘ಪ್ರತಿವರ್ಷವೂ ದರವನ್ನು ಏರಿಕೆ ಮಾಡಲಾಗುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ದರ ಏರಿಕೆ ಹಿಂಪಡೆಯುವವರೆಗೂ ಮುಷ್ಕರ ನಡೆಸಲಿದ್ದೇವೆ’ ಎಂದರು.

‘7ರ ಮಧ್ಯರಾತ್ರಿ 12 ಗಂಟೆಯಿಂದಲೇ ಲಾರಿ, ಗೂಡ್ಸ್‌ ಸೇರಿದಂತೆ ಎಲ್ಲ ಬಗೆಯ ಸರಕು ಸಾಗಣೆ ವಾಹನಗಳ ಸಂಚಾರ ಬಂದ್‌ ಆಗಲಿದೆ. ಬೇಡಿಕೆ ಈಡೇರಿಸುವವರೆಗೂ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಹಾಲು, ಹಣ್ಣು, ತರಕಾರಿ, ಪಡಿತರ, ಪೆಟ್ರೋಲ್ ಹಾಗೂ ಡೀಸೆಲ್ ಸಾಗಣೆಯಲ್ಲೂ ತೊಂದರೆ ಉಂಟಾಗಬಹುದು’ ಎಂದರು.

ADVERTISEMENT

‘ದೇಶದಲ್ಲಿ 90 ಲಕ್ಷ ಸರಕು ಸಾಗಣೆ ವಾಹನಗಳಿವೆ. ರಾಜ್ಯದಲ್ಲಿ 9 ಲಕ್ಷ ಹಾಗೂ ಬೆಂಗಳೂರಿನಲ್ಲೇ 3.5 ಲಕ್ಷ ವಾಹನಗಳಿವೆ. ಅಗತ್ಯ ವಸ್ತುಗಳು ಸೇರಿದಂತೆ ಹಲವು ಸರಕುಗಳನ್ನು ಈ ವಾಹನಗಳು ನಿತ್ಯ ಸಾಗಣೆ ಮಾಡುತ್ತಿವೆ

‘ವಾಹನಗಳಿಗೂ ಥರ್ಡ್‌ ಪಾರ್ಟಿ ವಿಮೆ ಕಡ್ಡಾಯ ಮಾಡಲಾಗಿದೆ. ಆದರೆ, ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎ) 2002ರಲ್ಲಿದ್ದ ದರಕ್ಕಿಂತ 2018ರಲ್ಲಿ ಶೇ 117ರಷ್ಟು ಹೆಚ್ಚಳ ಮಾಡಿದೆ. ವಿಮೆ ಮೇಲಿನ ಶೇ 18ರಷ್ಟು ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಸೂಲಿ ಮಾಡಲಾಗುತ್ತಿದೆ. ಇದು ವಾಹನಗಳ ಮಾಲೀಕರಿಗೆ ಹೊರೆಯಾಗಿದೆ’ ಎಂದರು.

ಸ್ವಯಂಪ್ರೇರಿತ ಏರಿಕೆ: ‘ದೇಶದಲ್ಲಿ 20ಕ್ಕೂ ಹೆಚ್ಚು ವಿಮೆ ಕಂಪನಿಗಳಿವೆ. ದರ ಏರಿಕೆ ಬಗ್ಗೆ ಅವುಗಳು ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ಅಷ್ಟಾದರೂ ಐಆರ್‌ಡಿಎ, ಸ್ವಯಂಪ್ರೇರಿತವಾಗಿ ದರ ಏರಿಕೆ ಮಾಡುತ್ತಿದೆ. ಇದನ್ನು ಖಂಡಿಸಿ ಮಾರ್ಚ್ 10ರಂದು ನಮ್ಮ ಒಕ್ಕೂಟದಿಂದ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಚನ್ನಾರೆಡ್ಡಿ ದೂರಿದರು.

‘ಕಂಪನಿಗಳ ಪರವಾಗಿ ಪ್ರಾಧಿಕಾರವು ಕೆಲಸ ಮಾಡುತ್ತಿದೆ. ಇದರ ಹಿಂದೆ ದೊಡ್ಡ ಲಾಬಿಯೇ ಇದೆ. ಪ್ರತಿವರ್ಷವೂ ವಿಮೆ ಕಂತಿನ ದರ ಏರಿಕೆ ಮಾಡುವುದನ್ನು ತಡೆಯುವ ಮೂಲಕ ಕೇಂದ್ರ ಸರ್ಕಾರವು ನಮ್ಮ ಕೂಗಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ವರ್ಷವಾರು ವಿಮೆ ಕಂತಿನ ದರ ಏರಿಕೆ(₹ಗಳಲ್ಲಿ)

ವರ್ಷ, ಕನಿಷ್ಠ, ಗರಿಷ್ಠ

2011, 9,400, 11,410

2012, 10,902, 12,529

2013, 13,082, 15,035

2014, 14,390, 16,571

2015, 14,390, 19,846

2016, 14,390, 25,800

2017, 14,390, 33,024

2018, 14,390, 41,114

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.