ADVERTISEMENT

ಕಪ್ಪುಹಣ: ಭಾರತದ ಜೊತೆ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ

‘ಗೋಪ್ಯತೆ, ಡೇಟಾ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ರಾಜಿ ಇಲ್ಲ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 2:59 IST
Last Updated 17 ಜೂನ್ 2017, 2:59 IST
ಕಪ್ಪುಹಣ:  ಭಾರತದ ಜೊತೆ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ
ಕಪ್ಪುಹಣ: ಭಾರತದ ಜೊತೆ ಮಾಹಿತಿ ವಿನಿಮಯಕ್ಕೆ ಒಪ್ಪಿಗೆ   

ಬರ್ನ್/ನವದೆಹಲಿ: ಸ್ವಿಸ್‌ ಬ್ಯಾಂಕ್‌ ಕಪ್ಪುಹಣ ಠೇವಣಿದಾರರ ಬಗ್ಗೆ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ   ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಸ್ವಿಟ್ಜರ್ಲೆಂಡ್‌ ಸರ್ಕಾರ  ಒಪ್ಪಿಗೆ ಸೂಚಿಸಿದೆ.

ಆದರೆ, ಗೋಪ್ಯತೆ ಮತ್ತು  ಡೇಟಾ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು  ಸ್ಪಷ್ಟವಾಗಿ ಹೇಳಿದೆ.

ಇನ್ನೂ ಎರಡು ವರ್ಷ : ಎಲ್ಲವೂ ನಿರೀಕ್ಷೆಯಂತೆ ನಡೆದರೂ ಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಖಾತೆ ಮತ್ತು ತೆರಿಗೆ ವಂಚಿತ ಹಣದ ವಹಿವಾಟಿನ  ಬಗ್ಗೆ ಮಾಹಿತಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕಾಗುತ್ತದೆ. ಸ್ವಯಂಚಾಲಿತ ಮಾಹಿತಿ ವಿನಿಮಯ   ವ್ಯವಸ್ಥೆ (ಎಇಒಐ) ಅನುಷ್ಠಾನಕ್ಕೆ ಇನ್ನೂ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ.

ADVERTISEMENT

2018ರಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದ್ದು, 2019ರ ಅಂತ್ಯಕ್ಕೆ ಮೊದಲ  ಹಂತದ ಮಾಹಿತಿ ವಿನಿಮಯ ಕಾರ್ಯ ಆರಂಭವಾ
ಗಲಿದೆ ಎಂದು ಸ್ವಿಸ್‌ ಫೆಡರಲ್‌ ಕೌನ್ಸಿಲ್‌ ತಿಳಿಸಿದೆ. ಈ ವರ್ಷ ಸ್ವಿಟ್ಜರ್ಲೆಂಡ್‌ ಸರ್ಕಾರ ಎಲ್ಲ ಐರೋಪ್ಯ  ರಾಷ್ಟ್ರ ಸೇರಿದಂತೆ 38 ದೇಶಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಚಾಲನೆ ನೀಡಿದೆ. 2018ರ ವೇಳೆಗೆ ಈ ರಾಷ್ಟ್ರಗಳ ಜತೆ ಮೊದಲ ಹಂತದ ಮಾಹಿತಿ ವಿನಿಮಿಯ ಆರಂಭವಾಲಿದೆ. 

ವಿಳಂಬ ಇಲ್ಲ: ಶುಕ್ರವಾರ ನಡೆದ ಸ್ವಿಸ್‌ ಫೆಡರಲ್‌ ಕೌನ್ಸಿಲ್‌ ಸಭೆಯಲ್ಲಿ  ಈ ಕುರಿತ ಕರಡು ಅಧಿಸೂಚನೆಗೆ ಅನುಮೋದನೆ ದೊರೆತಿದೆ.
ಹೊಸ ವ್ಯವಸ್ಥೆ ನಿರ್ದಿಷ್ಟವಾಗಿ ಎಂದಿನಿಂದ ಆರಂಭವಾಗಲಿದೆ ಎಂಬ ಬಗ್ಗೆ ಕೌನ್ಸಿಲ್‌ ಶೀಘ್ರ ಭಾರತ ಹಾಗೂ ಉಳಿದ ರಾಷ್ಟ್ರಗಳಿಗೆ ತಿಳಿಸಲಿದೆ.
‘ಈ ತೀರ್ಮಾನಕ್ಕೆ ಜನಮತ

ಗಣನೆಯ ಅಗತ್ಯವಿಲ್ಲ. ಹೀಗಾಗಿ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬವಾಗುವ ಸಾಧ್ಯತೆ ಇಲ್ಲ’  ಎಂದು ವಿಶ್ವಾಸ ವ್ಯಕ್ತಪಡಿಸಿದೆ.  ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ  ಒಪ್ಪಂದಕ್ಕೆ ಸಹಿ ಹಾಕುವ ಮುನ್ನ  ಭಾರತ ಹಾಗೂ ಇನ್ನಿರ  ರಾಷ್ಟ್ರಗಳ  ಜತೆ ಸಮಗ್ರ ಸಮಾಲೋಚನೆ ನಡೆಸಲಾಗಿದೆ.

ಈ ರಾಷ್ಟ್ರಗಳ ಸಲಹೆ, ಸೂಚನೆ ಪರಿಗಣಿಸಲಾಗಿದೆ ಎಂದು ಕೌನ್ಸಿಲ್‌ ತಿಳಿಸಿದೆ. ಆಯಾ ರಾಷ್ಟ್ರಗಳ ಕಾನೂನಿಗೆ ಅನುಗುಣವಾಗಿ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ವ್ಯವಸ್ಥೆ ಜಾರಿಯಾಗಲಿದೆ.

ಜಾಗತಿಕ ಮಾನದಂಡ: ಬಹುಹಂತದ ಸ್ಪರ್ಧಾತ್ಮಕ ಪ್ರಾಧಿಕಾರ ಒಪ್ಪಂದದ (ಎಂಸಿಎಎ) ಆಧಾರದ ಮೇಲೆ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ರೂಪಿಸಲಾಗಿದೆ. ಆರ್ಥಿಕ  ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ(ಒಇಸಿಡಿ) ರೂಪಿಸಿದ ಜಾಗತಿಕ ಮಾನದಂಡಗಳ ಆಧಾರದ ಮೇಲೆ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.

ಒತ್ತಡಕ್ಕೆ ಮಣಿದ ಸ್ವಿಸ್‌
ಭಾರತ ಮತ್ತು ಇನ್ನಿತರ ದೇಶಗಳ ಒತ್ತಡಕ್ಕೆ ಮಣಿದ ಸ್ವಿಟ್ಜರ್ಲೆಂಡ್‌  ಸರ್ಕಾರ ಮೂರು ವರ್ಷಗಳ ಹಿಂದೆ ತನ್ನ ವಿದೇಶಾಂಗ ನೀತಿಯ ಪ್ರಮುಖ ಕಾನೂನಿಗಳಿಗೆ ತಿದ್ದುಪಡಿ ತಂದಿತ್ತು. ಇದರಿಂದ ಕಪ್ಪುಹಣದ ಶಂಕಿತ ಬ್ಯಾಂಕ್‌ ಖಾತೆ ವಿವರಗಳ ಬಗ್ಗೆ ಭಾರತ ಮತ್ತು ಇನ್ನಿತರ ರಾಷ್ಟ್ರಗಳು ‘ಸಾಮೂಹಿಕ ವಾಗಿ ಮನವಿ’ ಮಾಡಿಕೊಳ್ಳಲು ಅವಕಾಶ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.