ADVERTISEMENT

ಕಾಸಿಗಾಗಿ ಸುದ್ದಿ: ಸಮಿತಿ ಸಭೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): `ಕಾಸಿಗಾಗಿ ಸುದ್ದಿ~ಗೆ ಸಂಬಂಧಿಸಿದಂತೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಸಾಧಕ-ಬಾಧಕಗಳ ಕುರಿತು ಪರಿಶೀಲಿಸಲು ಇದಕ್ಕೆ ಸಂಬಂಧಿಸಿದ ಸಚಿವರ ಸಮಿತಿ ಶೀಘ್ರವೇ ಸಭೆ ಸೇರಲಿದೆ.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ರಾಜ್ಯಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರ ತಿಳಿಸಿದರು.

`ಕಾಸಿಗಾಗಿ ಸುದ್ದಿ~ಯ ಹಲವು ಮಗ್ಗಲುಗಳನ್ನು ಪರಿಶೀಲಿಸಿ, ಸಮಗ್ರ ನೀತಿ ರೂಪಿಸಲು ಹಾಗೂ ಈ ಕುರಿತ ದೂರುಗಳ ವಿಚಾರಣೆಗೆ ವ್ಯವಸ್ಥೆಯೊಂದನ್ನು ಹುಟ್ಟುಹಾಕಲು ಕಳೆದ ವರ್ಷ ಜನವರಿಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದಲ್ಲಿ ಸಚಿವರ ಸಮಿತಿ ರಚಿಸಲಾಗಿತ್ತು.

ಸಮಿತಿಯ ಅಧ್ಯಕ್ಷರಾಗಿರುವ ಮುಖರ್ಜಿ ಅವರ ಬಿಡುವಿಲ್ಲದ ಕೆಲಸಗಳಿಂದಾಗಿ ಕಳೆದ ಸೆಪ್ಟೆಂಬರ್‌ಗೂ ಮುನ್ನ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಪತ್ರಿಕಾ ಮಂಡಳಿ ಸಲ್ಲಿಸಿರುವ ಶಿಫಾರಸುಗಳ ಕುರಿತು ಮತ್ತಷ್ಟು ಚರ್ಚಿಸಲು ಶೀಘ್ರದಲ್ಲೇ ಸಮಿತಿಯ ಎರಡನೇ ಸಭೆ ನಡೆಯಲಿದೆ ಎಂದು ಅಂಬಿಕಾ ಸೋನಿ ಹೇಳಿದರು.

ಪಿಸಿಐ ಶಿಫಾರಸು: ಚುನಾವಣಾ  ಅವ್ಯವಹಾರದ ಅಡಿ `ಕಾಸಿಗಾಗಿ ಸುದ್ದಿ~ಯನ್ನೂ ಶಿಕ್ಷಾರ್ಹ ಅಪರಾಧವಾಗಿಸಲು 1951ರ `ಪೀಪಲ್ಸ್ ಆ್ಯಕ್ಟ್~ಗೆ ತಿದ್ದುಪಡಿ ತರಬೇಕು. `ಕಾಸಿಗಾಗಿ ಸುದ್ದಿ~ಗೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಲು ಪತ್ರಿಕಾ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡಬೇಕು.

ಇಂತಹ ಸುದ್ದಿಗಳ ಕುರಿತು ದೂರು ಸಲ್ಲಿಸಲು ಚುನಾವಣಾ ಆಯೋಗದ ವ್ಯಾಪ್ತಿಯಲ್ಲೇ ವಿಶೇಷ ಘಟಕವೊಂದನ್ನು ಸ್ಥಾಪಿಸಬೇಕು. ಮಾಧ್ಯಮಗಳು ಸ್ವಯಂ ನಿಯಂತ್ರಣ ಸಾಧಿಸಬೇಕು ಹಾಗೂ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಂಡಳಿ ಶಿಫಾರಸಿನಲ್ಲಿ ಹೇಳಿದೆ.
 
ಇದಲ್ಲದೇ ಜಾಹೀರಾತು ಎಂಬ ಶೀರ್ಷಿಕೆಯ ಅಡಿ ಪದೇಪದೇ ಸುದ್ದಿ ಪ್ರಕಟಿಸುವುದು ಹಾಗೂ ಸುದ್ದಿರೂಪದಲ್ಲಿ ಜಾಹೀರಾತು ಪ್ರಕಟಿಸುವುದರ ವಿರುದ್ಧ ಮಾಧ್ಯಮಗಳಿಗೆ ಮಂಡಳಿ ಎಚ್ಚರಿಕೆಯನ್ನೂ ನೀಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.