ADVERTISEMENT

ಕೊನೆಗೂ ಪಂಜಾಬ್‌ನಲ್ಲಿ ಸೆರೆ ಸಿಕ್ಕ ಹನಿಪ್ರೀತ್‌

ಪಿಟಿಐ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಕೊನೆಗೂ ಪಂಜಾಬ್‌ನಲ್ಲಿ ಸೆರೆ ಸಿಕ್ಕ ಹನಿಪ್ರೀತ್‌
ಕೊನೆಗೂ ಪಂಜಾಬ್‌ನಲ್ಲಿ ಸೆರೆ ಸಿಕ್ಕ ಹನಿಪ್ರೀತ್‌   

ಚಂಡೀಗಡ: ಒಂದು ತಿಂಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಹನಿಪ್ರೀತ್‌ ಸಿಂಗ್‌ ಇನ್ಸಾನ್‌ (36) ಕೊನೆಗೂ ಪಂಜಾಬ್‌ನಲ್ಲಿ ಸೆರೆ ಸಿಕ್ಕಿದ್ದಾಳೆ.

ಪಂಜಾಬ್‌ನ ಝಿರಾಕ್‌ಪುರ–ಪಟಿಯಾಲಾ ಹೆದ್ದಾರಿಯಲ್ಲಿ ಮಂಗಳವಾರ ಹರಿಯಾಣದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಆರೋಪಿ ಪ್ರಿಯಾಂಕಾ ತನೇಜಾ ಅಲಿಯಾಸ್‌ ಹನಿಪ್ರೀತ್‌ಳನ್ನು ಬಂಧಿಸಿದ್ದಾರೆ. ಆಕೆಯ ಜತೆಗಿದ್ದ ಮತ್ತೊಬ್ಬ ಮಹಿಳೆಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆಕೆಯನ್ನು ಪಂಚಕುಲಾದ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಿದ್ದಾರೆ.

ADVERTISEMENT

ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವುದಾಗಿ ಹರಿಯಾಣ ಡಿಜಿಪಿ ಬಿ.ಎಸ್‌. ಸಂಧು ತಿಳಿಸಿದ್ದಾರೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಬಂಧನದ ನಂತರ ಏಕಾಏಕಿ ಕಾಣೆಯಾಗಿದ್ದ ಹನಿಪ್ರೀತ್‌ ಪಂಚಕುಲಾದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಳು.

ಸೋಮವಾರ ಎರಡು ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಪೊಲೀಸರು ಹನಿಪ್ರೀತ್‌ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕೆಯ ವಿರುದ್ಧ ಹರಿಯಾಣ ಪೊಲೀಸರು ಲುಕ್‌ಔಟ್‌ ನೋಟಿಸ್‌ ಮತ್ತು ಬಂಧನ ವಾರೆಂಟ್‌ ಹೊರಡಿಸಿದ್ದರು.

ಈ ನಡುವೆ ಪಂಚಕುಲಾ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.