ADVERTISEMENT

ಗಾಂಧಿ ಹತ್ಯೆ: ಮರುತನಿಖೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:31 IST
Last Updated 30 ಅಕ್ಟೋಬರ್ 2017, 19:31 IST

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಗಾಂಧಿ ಮರಿ ಮೊಮ್ಮಗ ತುಷಾರ್‌ ಗಾಂಧಿ, ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

1948ರ ಜನವರಿ 30ರಂದು ನಡೆದ ಗಾಂಧಿ ಹತ್ಯೆ ಮರು ತನಿಖೆ ಕೋರಿ ಅಭಿನವ ಭಾರತ ಸಂಸ್ಥೆಯ ಟ್ರಸ್ಟಿ ಮುಂಬೈನ ಡಾ. ಪಂಕಜ್‌ ಫಡ್ನೀಸ್‌ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನು ಪ್ರಶ್ನಿಸಿ ತುಷಾರ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೋಹನ್ ಎಂ. ಶಾಂತನಗೌಡರ ಮತ್ತು ಎಸ್‌.ಎ. ಬೊಬ್ಡೆ ವಿಚಾರಣೆ ನಡೆಸಿದರು. ಈ ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರಾಗಿರುವ ಹಿರಿಯ ವಕೀಲ ಅಮರೇಂದರ್‌ ಶರನ್‌ ಮೊದಲು ವರದಿ ಸಲ್ಲಿಸಲಿ ಎಂದು
ನ್ಯಾಯಮೂರ್ತಿಗಳು ಹೇಳಿದರು.

ADVERTISEMENT

ಗಾಂಧಿ ಹತ್ಯೆ ಹಿಂದಿನ ಸಂಚಿನ ಬಗ್ಗೆ ಹೊಸದಾಗಿ ತನಿಖೆ ನಡೆಸಲು ಆಯೋಗ ನೇಮಕ ಮಾಡುವಂತೆ ಕೋರಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಇದೇ ಜೂನ್‌ 6ರಂದು ತಳ್ಳಿ ಹಾಕಿತ್ತು.

ಇದನ್ನು ಪ್ರಶ್ನಿಸಿ ಅಭಿನವ ಭಾರತ ಸಂಸ್ಥೆಯ ಡಾ. ಫಡ್ನೀಸ್‌ ಸಲ್ಲಿಸಿದ್ದ ಅರ್ಜಿಯನ್ನು ಎಂಟು ವಾರಗಳ ನಂತರ  ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದಿನ ಸಂಚಿನ ಮರು ತನಿಖೆ ಅಗತ್ಯ ಇಲ್ಲ ಎಂಬುದು ತುಷಾರ್‌ ಗಾಂಧಿ ಅವರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.