ADVERTISEMENT

ಗಿರ್ ಅರಣ್ಯದ ಬಳಿ ಸಿಂಹಗಳ ಬೆಂಗಾವಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಪಿಟಿಐ
Published 1 ಜುಲೈ 2017, 6:12 IST
Last Updated 1 ಜುಲೈ 2017, 6:12 IST
ಗಿರ್ ಅರಣ್ಯದ ಬಳಿ ಸಿಂಹಗಳ ಬೆಂಗಾವಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಗಿರ್ ಅರಣ್ಯದ ಬಳಿ ಸಿಂಹಗಳ ಬೆಂಗಾವಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ   

ಗುಜರಾತ್: ಮಂಗುಬೆನ್ ಮಕ್ವಾನಾ ಎಂಬ ಮಹಿಳೆ ಜೂನ್ 29ರ ರಾತ್ರಿಯನ್ನು ಮರೆಯುದಕ್ಕೆ ಸಾಧ್ಯವೇ ಇಲ್ಲ. ಮಧ್ಯರಾತ್ರಿ ಗಿರ್ ಅರಣ್ಯದ ಬಳಿ ಆಂಬುಲೆನ್ಸ್‌ನಲ್ಲಿ ಹೆರಿಗೆಯಾದಾಗ ಆಕೆಗೆ ಬೆಂಗಾವಲಾಗಿ ನಿಂತಿದ್ದು 12 ಸಿಂಹಗಳು!

32ರ ಹರೆಯದ ಮಕ್ವಾನಾ ಅವರನ್ನು ರಾತ್ರಿ 108 ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಗಿರ್ ಅರಣ್ಯದ ಬಳಿ ಅಮರೀಲಿ ಗ್ರಾಮದಲ್ಲಿ ಸಿಂಹಗಳ ಗುಂಪೊಂದು ಆಂಬುಲೆನ್ಸ್‌ಗೆ ತಡೆಯೊಡ್ಡಿದೆ.

'108'ರಲ್ಲಿ ಇದ್ದ ಸಿಬ್ಬಂದಿಗಳು ಸಿಂಹಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಾಹನ ಮುಂದಕ್ಕೆ ಹೋಗದಂತೆ ಸಿಂಹದ ಗುಂಪುಗಳು ಸುತ್ತುವರಿದಾಗ ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಗಳಿಗೆ ಬೇರೇನೂ ಮಾರ್ಗ ತೋಚದೆ ಆಂಬುಲೆನ್ಸ್ ನಲ್ಲೇ ಹೆರಿಗೆ ಮಾಡಿಸಲು ತೀರ್ಮಾನಿಸಿದ್ದಾರೆ.

ADVERTISEMENT

ಆಗ ಸಮಯ ತಡರಾತ್ರಿ 2.30. ವೈದ್ಯರಿಗೆ ಫೋನ್ ಮಾಡಿ ಅವರ ಸಲಹೆಯಂತೆ ಆಂಬುಲೆನ್ಸ್‌ನಲ್ಲಿದ್ದ  ವೈದ್ಯಕೀಯ ಸಿಬ್ಬಂದಿ ಮಕ್ವಾನಾ ಅವರನ್ನು ಹೆರಿಗೆ ಮಾಡಿಸಿದರು. ಮಕ್ವಾನಾ ಅವರ ಹೆರಿಗೆ ಆದ ನಂತರ ಆಂಬುಲೆನ್ಸ್ ಹೊರಡಲು ಅಣಿಯಾದಾಗ ಸಿಂಹಗಳೆಲ್ಲವೂ ಅಲ್ಲಿಂದ ಸರಿದು, ವಾಹನಕ್ಕೆ ದಾರಿ ಮಾಡಿಕೊಟ್ಟಿವೆ.

ಲುನಾಸಾಪುರ್ ಗ್ರಾಮ ನಿವಾಸಿಯಾದ ಮಕ್ವಾನಾ ಅವರನ್ನು ಜಫ್ರಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆಯೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು  108ರ ತುರ್ತು ನಿರ್ವಹಣಾ ಅಧಿಕಾರಿ ಚೇತನ್ ಗಾಧೆ ಹೇಳಿದ್ದಾರೆ.

ಮಕ್ವಾನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಕ್ವಾನಾ ಈಗ ಜಫ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಮ್ಮ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.