ADVERTISEMENT

ಗೋಧಿ ಬೀಡಿನಲ್ಲಿ ಕೋಟಿವೀರರ ಸಮರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಚಂಡೀಗಡ (ಐಎಎನ್‌ಎಸ್): ಈ ತಿಂಗಳ 30ರಂದು ನಯುವ ಚುನಾವಣೆಗೆ ಸಜ್ಜಾಗುತ್ತಿರುವ ಗೋಧಿ ಬೀಡು ಪಂಜಾಬ್, ಸಿರಿವಂತ ಅಭ್ಯರ್ಥಿಗಳ ನಾಡೂ ಆಗಿದೆ. ವಿಶೇಷವಾಗಿ ಅಲ್ಲಿನ ಎರಡು ಪ್ರಮುಖ ಕುಟುಂಬಗಳ ಘೋಷಿತ ಆಸ್ತಿ ಮೌಲ್ಯ 250 ಕೋಟಿ ರೂಪಾಯಿಗಳಾಗಿದೆ.

ಆಡಳಿತಾರೂಢ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ತಮ್ಮ ಹೆಸರಿನಲ್ಲಿ ರೂ 76 ಕೋಟಿ ಆಸ್ತಿಪಾಸ್ತಿ ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಗಡಿಭಾಗದ ಫಿರೋಜ್‌ಪುರ ಜಿಲ್ಲೆಯ ಜಲಾಲಾಬಾದ್ ಕ್ಷೇತ್ರದಿಂದ ಅವರು ಆಯ್ಕೆ ನಿರೀಕ್ಷಿಸಿದ್ದಾರೆ.

ಬಥಿಂಡಾ ಕ್ಷೇತ್ರದ ಸಂಸದೆಯಾದ ಅವರ ಪತ್ನಿ ಹರ್‌ಸಿಮ್ರತ್ ಕೌರ್ ಬಾದಲ್ 15.38 ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಗುಡ್‌ಗಾಂವ್‌ನಲ್ಲಿ ಎರಡು ಐಷಾರಾಮಿ ಹೋಟೆಲ್‌ಗಳನ್ನು ಹೊಂದಿರುವ ಈ ದಂಪತಿಯ ಆಸ್ತಿಯ ಮೊತ್ತ ರೂ 91 ಕೋಟಿ ಮೀರಿದ್ದರೂ ತಮ್ಮ ಹೆಸರಿನಲ್ಲಿ ಕಾರನ್ನು ಹೊಂದಿಲ್ಲದಿರುವುದು ಅಚ್ಚರಿಯ ಸಂಗತಿ. ಸುಖ್‌ಬೀರ್ ಹೆಸರಿನಲ್ಲಿ ಒಂದು ಟ್ರ್ಯಾಕ್ಟರ್ ಮಾತ್ರ ಇದೆ.

ADVERTISEMENT

ಸುಖ್‌ಬೀರ್ ಅವರ ತಂದೆ ಹಾಗೂ ಮುಖ್ಯಮಂತ್ರಿಯಾದ 84 ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ಅವರ ಘೋಷಿತ ಆದಾಯ ರೂ 7 ಕೋಟಿ. ಬಾದಲ್ ಕುಟುಂಬದಲ್ಲಿ ಅತ್ಯಂತ ಕಡಿಮೆ ಸಿರಿವಂತನೆಂದರೇ ಇವರೇ.
ಲಂಬಿ ಕ್ಷೇತ್ರದಲ್ಲಿ ಇವರ ಕಿರಿಯ ಸೋದರ ಗುರುದಾಸ್ ಬಾದಲ್ (81) ಅವರೇ ಪ್ರಕಾಶ್ ಬಾದಲ್‌ಗೆ ಎದುರಾಳಿ. ಗುರುದಾಸ್ ಆದಾಯ 20 ಕೋಟಿ ರೂಪಾಯಿಯಷ್ಟಿದೆ.

ಹರ್‌ಸಿಮ್ರತ್ ಸಹೋದರನಾದ, ಮಜೀದಾ ಕ್ಷೇತ್ರದ ಶಾಸಕ ವಿಕ್ರಮ್ ಸಿಂಗ್ ಮಜೀದಿಯಾ ಕೂಡ ಕೋಟ್ಯಧಿಪತಿಯೇ. ಅವರ ಘೋಷಿತ ಆಸ್ತಿ ಮೊತ್ತ 11.21 ಕೋಟಿ ರೂಪಾಯಿ.

ತಮ್ಮ ಎಂದಿನ ಪಟಿಯಾಲ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಸ್ತಿ ಮೌಲ್ಯ 45.74 ಕೋಟಿ ರೂಪಾಯಿಯಷ್ಟಿದೆ.

ಧುರಿ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಿಯಾಗಿರುವ ಅಮರಿಂದರ್ ಬಂಧುವಾದ ಅರವಿಂದ್ ಖನ್ನಾ 46 ಕೋಟಿ ರೂಪಾಯಿಯ ಆಸ್ತಿಪಾಸ್ತಿಗೆ ಒಡೆಯರು. ಇವರ ವಿರುದ್ಧ ಸಿಬಿಐ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು ಅದರ ವಿಚಾರಣೆ ಬಾಕಿ ಇದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ರಾಜೀಂದರ್ ಕೌರ್ ಭಟ್ಟಲ್ 3 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದಾರೆ.

ಮಾಜಿ ಕ್ರಿಕೆಟಿಗರಾದ ರಾಜಕಾರಣಿ ನವ್‌ಜೋತ್ ಸಿಂಗ್ ಪತ್ನಿ ನವ್‌ಜೋತ್ ಕೌರ್ ಸಿಧು 2.38 ಕೋಟಿ ರೂಪಾಯಿಯ ಆಸ್ತಿಪಾಸ್ತಿಗೆ ಒಡತಿ. ಅಮೃತಸರ ಪೂರ್ವ ಕ್ಷೇತ್ರದ ಶಾಸಕ ಸ್ಥಾನ ಬಯಸಿ ಬಿಜೆಪಿಯಿಂದ ಅವರು ಅಖಾಡಕ್ಕೆ ಧುಮುಕಿದ್ದಾರೆ.

ಜಲಂಧರ್ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಅವತಾರ್ ಹೆನ್ರಿ 14 ಕೋಟಿ ರೂಪಾಯಿಯ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಅಕಾಲಿದಳ- ಬಿಜೆಜಿ ಮೈತ್ರಿಕೋಟದ ಇನ್ನೂ ಹಲವು ಅಭ್ಯರ್ಥಿಗಳು ಕೋಟಿ ಕುಳಗಳೇ ಆಗಿದ್ದಾರೆ.

21ಕ್ಕೆ ಪ್ರಧಾನಿ ಭಾಷಣ

ಚಂಡೀಗಡ (ಪಿಟಿಐ): ಈ ತಿಂಗಳ 21ಕ್ಕೆ ಅಮೃತಸರ ಮತ್ತು ಲೂಧಿಯಾನದಲ್ಲಿ ಚುನಾವಣಾ ಪ್ರಚಾರ ಜಾಥಾವನ್ನು ಉದ್ದೇಶಿಸಿ ಪ್ರಧಾನಿ ಮನಮೋಹನ್ ಸಿಂಗ್ ಭಾಷಣ ಮಾಡುವರು ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ರಾಜ್ಯನಲ್ಲಿ ಜ. 30ಕ್ಕೆು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.