ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿರುವ ಹಿಂಬಾಲಕರ ಸಂಖ್ಯೆ 1.6 ಕೋಟಿ ಗಡಿ ದಾಟಿದೆ!
ಕಳೆದ ಒಂದು ವರ್ಷದಿಂದ ಈಚೆಗೆ ಅವರ ಹಿಂಬಾಲಕರ ಸಂಖ್ಯೆ ಏರುತ್ತಲೇ ಇದೆ.
‘ಕೇವಲ ಎರಡು ತಿಂಗಳಲ್ಲಿ ಮೋದಿಯವರ ಟ್ವಿಟರ್ ಅಕೌಂಟ್‌ಗೆ ಹತ್ತು ಲಕ್ಷ ಮಂದಿ ಸೇರಿದ್ದಾರೆ. ಸೆ.22ಕ್ಕೆ ಮೋದಿಯವರನ್ನು ಇಷ್ಟಪಡುವ ಜನರ ಸಂಖ್ಯೆ 1.5 ಕೋಟಿ ದಾಟಿತ್ತು. ಮೇ 26, 2014 ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ 1.1 ಕೋಟಿ ಮಂದಿ ಅವರ ಹಿಂಬಾಲಕರಿದ್ದರು’ ಎಂದು ಟ್ವಿಟರ್‌ಪ್ರಕಟಿಸಿದೆ.
‘ಒಂದು ವರ್ಷದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿದ ಭಾರತೀಯ ಟ್ವಿಟರ್ ಖಾತೆ ಎಂಬ ಅಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಅಲ್ಲದೆ ಹೊಸ ದಾಖಲೆಯನ್ನೂ ಸೃಷ್ಟಿಸಿದ್ದಾರೆ’ ಎಂದು ಟ್ವಿಟರ್ ಹೇಳಿದೆ.
ಟ್ವಿಟರ್ ಖಾತೆಯಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಒಳಗೊಂಡಿರುವ ಭಾರತೀಯರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್
(1.78 ಕೋಟಿ ಹಿಂಬಾಲಕರು) ಮತ್ತು ನಟ ಶಾರೂಕ್ ಖಾನ್ (1.62 ಕೋಟಿ ಹಿಂಬಾಲಕರನ್ನು) ಇದ್ದಾರೆ.
ನರೇಂದ್ರ ಮೋದಿ ಅವರು 2009ರಿಂದ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿದ ಭಾರತೀಯ ನಾಯಕರಾಗಿದ್ದು, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೊದಲ ಸ್ಥಾನದಲ್ಲಿದ್ದು, ಅವರಿಗೆ 6.61 ಕೋಟಿ ಹಿಂಬಾಲಕರಿದ್ದಾರೆ.
‘ಎರಡನೇ ಸ್ಥಾನಕ್ಕೆ ಮೋದಿ ಮತ್ತು ಶಾರೂಕ್ ಖಾನ್ ನಡುವೆ ಪೈಪೋಟಿ ಇದೆ. ಈ ವರ್ಷಾಂತ್ಯಕ್ಕೆ ಯಾರು ಗೆಲ್ಲುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ’ ಎಂದು ಟ್ವಿಟರ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.