
ನವದೆಹಲಿ: ಡೌನ್ಸ್ ಸಿಂಡ್ರೋಮ್ (down’s syndrome) ಎಂಬ ಕಾರಣದಿಂದ 26 ವಾರಗಳ ಭ್ರೂಣವನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, 37 ವರ್ಷದ ಮಹಿಳೆಗೆ ಗರ್ಭಪಾತ ಮಾಡಿಸಿ ಕೊಳ್ಳಲು ಅವಕಾಶ ನಿರಾಕರಿಸಿದೆ.
‘ಒಂದು ಜೀವವನ್ನು ನಾವೀಗ ರಕ್ಷಿಸಬೇಕಿದೆ’ ಎಂದು ಕೋರ್ಟ್ ಹೇಳಿದೆ. ಗರ್ಭಧಾರಣೆ ಮುಂದುವರಿಸಿದರೆ ಈ ಮಹಿಳೆಯ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅವರನ್ನು ಪರೀಕ್ಷಿಸಲು ರಚಿಸಲಾದ ವೈದ್ಯಕೀಯ ಮಂಡಳಿ ವರದಿ ನೀಡಿದೆ. ಅದರ ಆಧಾರದಲ್ಲಿ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ.
‘ಡೌನ್ಸ್ ಸಿಂಡ್ರೋಮ್ ಇರುವ ಮಕ್ಕಳು ಕಡಿಮೆ ಬುದ್ಧಿವಂತರಾಗಿರುತ್ತಾರೆ ಎಂಬುದು ನಿಜ. ಆದರೆ ಅವರು ಉತ್ತಮ ಮನುಷ್ಯರೇ ಆಗುತ್ತಾರೆ’ ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ಅವರ ಪೀಠ ಹೇಳಿದೆ.
ಹುಟ್ಟುವ ಮಗುವಿಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಇರಬಹುದು. ಆದರೆ ಗರ್ಭಪಾತ ಮಾಡಬೇಕು ಎಂಬ ಸಲಹೆಯನ್ನು ವೈದ್ಯರು ನೀಡಿಲ್ಲ ಎಂದು ಪೀಠ ತಿಳಿಸಿದೆ.
ಈ ಹಿಂದೆ ಅವಕಾಶ ಕೊಟ್ಟಿದ್ದ ಸುಪ್ರೀಂ ಕೋರ್ಟ್
l ಫೆಬ್ರುವರಿ 7: ಭ್ರೂಣದ ಅಂಗಾಂಗಗಳ ಅಸಹಜ ಬೆಳವಣಿಗೆ ಮತ್ತು ತಾಯಿಯ ಪ್ರಾಣಕ್ಕೆ ಅಪಾಯ ಇದೆ ಎಂಬ ಕಾರಣಕ್ಕೆ 24 ವಾರಗಳ ಭ್ರೂಣವನ್ನು ತೆಗೆಸಲು 22 ವರ್ಷದ ಮಹಿಳೆಗೆ ಅವಕಾಶ ನೀಡಲಾಗಿತ್ತು.
l ಜನವರಿ 16: ಭ್ರೂಣಕ್ಕೆ ತಲೆಬುರುಡೆ ಇಲ್ಲದಿರುವುದರಿಂದ ಅದು ಬದುಕುಳಿಯುವುದಿಲ್ಲ ಎಂಬ ಕಾರಣಕ್ಕೆ 24 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೊಟ್ಟಿತ್ತು.
l ಜುಲೈ 25, 2016: 24 ವಾರಗಳ ಭ್ರೂಣವನ್ನು ತೆಗೆಸಲು ಅತ್ಯಾಚಾರ ಸಂತ್ರಸ್ತೆಗೆ ಅನುಮತಿ ನೀಡಿತ್ತು. ಭ್ರೂಣದ ಅಸಹಜ ಬೆಳವಣಿಗೆಯಿಂದಾಗಿ ತಾಯಿಯ ಜೀವಕ್ಕೆ ಅಪಾಯ ಇತ್ತು ಎಂದು ಅದು ತೀರ್ಪಿನಲ್ಲಿ ಹೇಳಿತ್ತು.
l ತಾಯಿಯ ಜೀವಕ್ಕೆ ಅಪಾಯ ಇದ್ದ ಪಕ್ಷದಲ್ಲಿ ಗರ್ಭ ಧರಿಸಿರುವ ಅವಧಿ 20 ವಾರಗಳಿಗಿಂತ ಹೆಚ್ಚಾಗಿದ್ದರೂ ಗರ್ಭಪಾತ ಮಾಡಿಸಿಕೊಳ್ಳಲು 1971ರ ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 5 ಅವಕಾಶ ನೀಡುತ್ತದೆ.
ಏನಿದು ಡೌನ್ಸ್ ಸಿಂಡ್ರೋಮ್?
ಸಾಮಾನ್ಯವಾಗಿ ಮನುಷ್ಯನಲ್ಲಿ 46 ವರ್ಣತಂತುಗಳಿರುತ್ತವೆ (ಕ್ರೋಮೋಜೋಮ್). ಆದರೆ ಡೌನ್ ಸಿಂಡ್ರೋಮ್ ಇರುವವರಲ್ಲಿ ಈ ಸಂಖ್ಯೆ 47 ಆಗಿರುತ್ತದೆ. ವರ್ಣತಂತುಗಳ ಬೇರೆ ಸಮಸ್ಯೆಗಳಿಂದಲೂ ಡೌನ್ ಸಿಂಡ್ರೋಮ್ ಉಂಟಾಗಬಹುದು. ಆದರೆ ಬಹಳ ವಿರಳ. ಈ ವರ್ಣತಂತು ಸಮಸ್ಯೆ ಹುಟ್ಟುವ ಮೊದಲೇ ರೂಪುಗೊಳ್ಳುತ್ತದೆ.
ಹೆಚ್ಚುವರಿ ಅಥವಾ ಅಸಹಜ ವರ್ಣತಂತು ಹೊಂದಿರುವುದು ಮಿದುಳು ಮತ್ತು ದೇಹದ ಬೆಳವಣಿಗೆಯ ರೀತಿಯನ್ನೇ ಬದಲಾಯಿಸುತ್ತದೆ. ನಿಸ್ತೇಜ ಮುಖ, ಓರೆ ಕಣ್ಣು, ಕುತ್ತಿಗೆ, ಕೈ, ಕಾಲು ಕುಬ್ಜವಾಗಿರುವುದು, ಸಡಿಲವಾಗಿರುವ ಸಂಧಿಗಳು, ಕಡಿಮೆ ಬುದ್ಧಿಮತ್ತೆ ಈ ಸಮಸ್ಯೆಯ ಮುಖ್ಯ ಲಕ್ಷಣಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.