ADVERTISEMENT

ತಿರುವಾಂಕೂರು ಪದ್ಮನಾಭ ನಿಧಿ ದಾಖಲೀಕರಣ ಆರಂಭ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 10:25 IST
Last Updated 20 ಫೆಬ್ರುವರಿ 2012, 10:25 IST
ತಿರುವಾಂಕೂರು ಪದ್ಮನಾಭ ನಿಧಿ ದಾಖಲೀಕರಣ ಆರಂಭ
ತಿರುವಾಂಕೂರು ಪದ್ಮನಾಭ ನಿಧಿ ದಾಖಲೀಕರಣ ಆರಂಭ   

ತಿರುವನಂತಪುರ (ಐಎಎನ್ಎಸ್): ಖ್ಯಾತ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಕಳೆದ ವರ್ಷ ಪತ್ತೆಯಾದ ಅಪಾರ ಪ್ರಮಾಣದ ನಿಧಿಯ ದಾಖಲೀಕರಣ ಕಾರ್ಯವು ಸುಪ್ರೀಂಕೋರ್ಟಿನಿಂದ ನೇಮಕಗೊಂಡ ಎರಡು ಸಮಿತಿಗಳ ಜಂಟಿ ಸಭೆಯೊಂದಿಗೆ ಸೋಮವಾರ ಇಲ್ಲಿ ಆರಂಭಗೊಂಡಿತು.

ಒಂದು ಸಮಿತಿಗೆ ಎಂ.ವಿ. ನಾಯರ್ ಮುಖ್ಯಸ್ಥ ರಾಗಿದ್ದರೆ ಇನ್ನೊಂದು ಸಮಿತಿಗೆ ನ್ಯಾಯಮೂರ್ತಿ (ನಿವೃತ್ತ) ಎಂ.ಎನ್. ಕೃಷ್ಣನ್ ಮುಖ್ಯಸ್ಥರಾಗಿದ್ದಾರೆ. ಉಭಯ ಸಮಿತಿಗಳಲ್ಲೂ ಕೇರಳ ಸರ್ಕಾರ ಮತ್ತು ದೇವಾಲಯದ ಪಾರುಪತ್ಯೇದಾರರಾದ ತಿರುವಾಂಕೂರಿನ ಹಿಂದಿನ ರಾಜಕುಟುಂಬದ ಸದಸ್ಯರು ಮತ್ತು ರತ್ನಾಭರಣ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಈ ಸಮಿತಿಗಳು ಒಳಗೊಂಡಿವೆ.

ದೇವಾಲಯದ ರಹಸ್ಯ ನೆಲ ಮಾಳಿಗೆಗಳಲ್ಲಿ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಅತ್ಯಮೂಲ್ಯ ಚಿನ್ನಾಭರಣಗಳ ಬೃಹತ್ ನಿಧಿ ಇದೆ ಎಂದು ನಂಬಲಾಗಿದ್ದು, ಈ ನಿಧಿ ಪತ್ತೆಯೊಂದಿಗೆ ಈ ದೇವಾಲಯ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ದೇವಾಲಯದಲ್ಲಿ ಒಟ್ಟು ಆರು ನೆಲ ಮಾಳಿಗೆಗಳಿದ್ದು ಅವುಗಳ ಪೈಕಿ ಐದು ನೆಲ ಮಾಳಿಗೆಗಳನ್ನು ಮಾಜಿ ಐಪಿಎಸ್ ಅಧಿಕಾರಿ ಟಿ.ಪಿ. ಸುಂದರರಾಜನ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಆಧರಿಸಿ ತೆರೆಯಲಾಗಿತ್ತು.
 
ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಪ್ರೀಂಕೋರ್ಟ್ 150 ವರ್ಷಗಳಿಂದ ತೆರೆಯದೇ ಇದ್ದ ಈ ನೆಲ ಮಾಳಿಗೆಗಳ ಸಂಪತ್ತಿನ ದಾಖಲೀಕರಣಕ್ಕಾಗಿ ಸಮಿತಿ ರಚಿಸಿ ಐದು ನೆಲಮಾಳಿಗೆಗಳ ಸಂಪತ್ತಿನ ದಾಖಲೀಕರಣದ ಬಳಿಕ ಆರನೇ ನೆಲಮಾಳಿಗೆಯನ್ನು ತೆರೆಯಬೇಕು ಎಂದು ಆಜ್ಞಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.