ADVERTISEMENT

ತೆರಿಗೆ ವಂಚನೆ: ಮದ್ಯ ದೊರೆ ಪೊಂಟಿ ಚಡ್ಡಾ ಮನೆ ಶೋಧ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಖನೌ/ನವದೆಹಲಿ (ಪಿಟಿಐ): ತೆರಿಗೆ ವಂಚನೆ ಆರೋಪದ ಮೇರೆಗೆ ಮದ್ಯದ ದೊರೆ ಮತ್ತು ವರ್ತಕ ಪೊಂಟಿ ಚಡ್ಡಾ ಅವರ ಲಖನೌ ಮತ್ತು ನವದೆಹಲಿಯ ನಿವಾಸಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಉತ್ತರ ಪ್ರದೇಶ ಮೂಲದವರಾಗಿರುವ ಚಡ್ಡಾಅವರಿಗೆ ಸೇರಿದ ವಿವಿಧ 13 ಸ್ಥಳಗಳನ್ನು ಅಧಿಕಾರಿಗಳು ಶೋಧ ನಡೆಸಿದರು. ಉತ್ತರ ಪ್ರದೇಶದಲ್ಲಿ ಲಖನೌ, ನೋಯಿಡಾ ಮತ್ತು ಮೊರಾದಾಬಾದ್‌ನಲ್ಲಿ 200 ಅಧಿಕಾರಿಗಳು ಆರು ಕಡೆ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿದರು.

ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಈಗ ದುಬೈನಲ್ಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿದ್ದು, ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳ ಮೂಲಕ ಚಡ್ಡಾ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವ ಬಗ್ಗೆಯೂ ಇಲಾಖೆ ತನಿಖೆ ನಡೆಸುತ್ತಿದೆ.

 ಅವರ ಇಬ್ಬರು ಪಾಲುದಾರರಾದ ಲಲಿತ್ ಕಪೂರ ಮತ್ತು ಗುರ್ಜಿತ್ ಕೊಚಾರ ಅವರ ದೆಹಲಿ ಮನೆಗಳಲ್ಲಿಯೂ ಶೋಧ ನಡೆಸಿರುವ ಅಧಿಕಾರಿಗಳು, ಹಣಕಾಸು ವ್ಯವಹಾರಗಳ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.