ADVERTISEMENT

ತೆಲಂಗಾಣ ರಾಜ್ಯಕ್ಕೆ ವಿರೋಧ: 7 ಆಂಧ್ರಪ್ರದೇಶ ಸಂಸದರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 8:59 IST
Last Updated 2 ಆಗಸ್ಟ್ 2013, 8:59 IST

ನವದೆಹಲಿ (ಪಿಟಿಐ): ಆಡಳಿತಾರೂಢ ಕಾಂಗ್ರೆಸ್ ಮತ್ತು ಯುಪಿಎಯ ತೆಲಂಗಾಣ ರಾಜ್ಯ ರಚನೆ ನಿರ್ಧಾರದಿಂದ ದಿಕ್ಕೆಟ್ಟಿರುವ ಆಂಧ್ರಪ್ರದೇಶದ ಏಳು ಮಂದಿ ಸಂಸತ್ ಸದಸ್ಯರು ಶುಕ್ರವಾರ ಸಂಸತ್ತಿಗೆ ರಾಜೀನಾಮೆ ಸಲ್ಲಿಸಿದ್ದು ಇನ್ನೂ ಹಲವರು ರಾಜೀನಾಮೆ ಸಲ್ಲಿಸುವ ಸೂಚನೆಗಳಿವೆ.

ಎ. ಸಾಯಿ ಪ್ರತಾಪ್ (ರಾಜಂಪೇಟ್ ಕ್ಷೇತ್ರ), ಅನಂತ ವೆಂಕಟರಾಮಿ ರೆಡ್ಡಿ (ಅನಂತಪುರ), ಸಿ.ವಿ. ಹರ್ಷ ಕುಮಾರ್ (ಅಮಲಪುರಂ -ಪರಿಶಷ್ಟ ಜಾತಿ), ಉಂಡವಲ್ಲಿ ಅರುಣಕುಮಾರ್ (ರಾಜಾಮುಂದ್ರಿ), ಲಗದಪತಿ ರಾಜಗೋಪಾಲ್ (ವಿಜಯವಾಡ) ಮತ್ತು ಎಸ್ ಪಿ ವೈ ರೆಡ್ಡಿ (ನಂದ್ಯಾಲ್) ಇವರು ರಾಜೀನಾಮೆ ಪತ್ರಗಳನ್ನು ಸಲ್ಲಿಸಿರುವ ಸಂಸತ್ ಸದಸ್ಯರು.

ಈ ಸಂಸತ್ ಸದಸ್ಯರು ತಮ್ಮ ರಾಜೀನಾಮೆ ಪತ್ರಗಳನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಟಿ.ಕೆ. ವಿಶ್ವನಾಥನ್ ಅವರಿಗೆ ಸಲ್ಲಿಸುತ್ತಿದ್ದಂತೆಯೇ ಮೇಲ್ಮನೆಯ ಏಕೈಕ ಸದಸ್ಯ ಕೆವಿಪಿ ರಾಮಚಂದ್ರ ರಾವ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಶಂಶೇರ್ ಕೆ. ಷರೀಫ್ ಅವರಿಗೆ ಸಲ್ಲಿಸಿದರು.

ರಾಜ್ಯದ ಸಬ್ಬಂ ಹರಿ (ಅನಕಪಲ್ಲಿ), ಮಗುಂತ ಶ್ರೀನಿವಾಸಲು ರೆಡ್ಡಿ (ಓಂಗೋಲ್) ಮತ್ತು ರಾಯಪತಿ ಸಾಂಬಶಿವರಾವ್ (ಗುಂಟೂರ್) ಈ ಮೂವರು ಲೋಕಸಭಾ ಸದಸ್ಯರೂ ತಮ್ಮ  ರಾಜೀನಾಮೆಗಳನ್ನು ಫ್ಯಾಕ್ಸ್ ಮೂಲಕ ಕಳುಹಿಸಿದ್ದಾರೆ ಎಂದು ಸಂಸತ್ ಸದಸ್ಯರು ತಿಳಿಸಿದರು.

ಆಂಧ್ರ ಪ್ರದೇಶದ ಕೇಂದ್ರ ಸಚಿವರು ನಾಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ನಂತರ ತಮ್ಮ ರಾಜೀನಾಮೆಗಳನ್ನು ಸಲ್ಲಿಸುವರು ಎಂದು ಸಂಸತ್ ಸದಸ್ಯರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.