ADVERTISEMENT

ದಾವಣಗೆರೆ ಚೆಕ್ ಬೌನ್ಸ್ ಪ್ರಕರಣ ; ಮಹಿಳೆಯ ನೆರವಿಗೆ ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ನವದೆಹಲಿ (ಪಿಟಿಐ): ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಎದುರಿಸುತ್ತಿದ್ದ ದಾವಣಗೆರೆಯ ವಿಧವೆಯೊಬ್ಬರ ಶಿಕ್ಷೆಯ ಅವಧಿಯನ್ನು ಒಂದು ವರ್ಷದಿಂದ ಎರಡೂವರೆ ತಿಂಗಳಿಗೆ ಇಳಿಸುವ ಮೂಲಕ ಸುಪ್ರೀಂಕೋರ್ಟ್ ಮಾನವೀಯತೆ ಮೆರೆದಿದೆ.

ಶಿಕ್ಷೆಗೆ ಒಳಗಾಗಿದ್ದ ಬಿ.ಚಂದ್ರಮತಿ ಅವರ ವಯಸ್ಸು, ಸಾಮಾಜಿಕ, ಆರ್ಥಿಕ ಸ್ಥಾನಮಾನ ಮತ್ತು ದೇಹಾರೋಗ್ಯದ ಸ್ಥಿತಿ ಪರಿಗಣಿಸಿ ನ್ಯಾಯಪೀಠ ಆಕೆಗೆ ನೀಡಿದ್ದ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದೆ.

`ಅರ್ಜಿದಾರರಿಗೆ 51 ವರ್ಷ ವಯಸ್ಸಾಗಿದೆ. ಬಡ ವಿಧವೆಯಾದ ಈಕೆ ಜೋಳದ ರೊಟ್ಟಿಗಳನ್ನು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಕುಟುಂಬದ ಏಕೈಕ ದುಡಿಯುವ ಸದಸ್ಯೆಯಾದ ಇವರು ಇಬ್ಬರು ಮಕ್ಕಳನ್ನೂ ನೋಡಿಕೊಳ್ಳಬೇಕಾಗಿದೆ. ಅವರ ಆರೋಗ್ಯವೂ ಚೆನ್ನಾಗಿದ್ದಂತಿಲ್ಲ. ಚೆಕ್ ಮೊತ್ತವೂ ಸೇರಿದಂತೆ ಆಕೆ ತನಗೆ ಸಾಲ ನೀಡಿದ್ದ ಎನ್.ಪ್ರಕಾಶ್ ಅವರಿಗೆ ಈಗಾಗಲೇ 2.20 ಲಕ್ಷ ರೂಪಾಯಿ ಪಾವತಿಸಿದ್ದಾರೆ. ವಿಚಿತ್ರ ಅಂಶ ಹಾಗೂ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ~ ಎಂದು ನ್ಯಾಯಪೀಠ ಹೇಳಿದೆ.

ಆದರೆ, ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆಯ 138ನೇ ಕಲಂ ಅಡಿ ದಾವಣಗೆರೆ ನ್ಯಾಯಾಲಯ ಚಂದ್ರಮತಿ ಅವರಿಗೆ ವಿಧಿಸಿದ್ದ ಒಂದು ವರ್ಷದ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನ್ಯಾಯಪೀಠ ಅಲ್ಲಗಳೆದಿಲ್ಲ.

ನ್ಯಾಯಾಂಗ ಬಂಧನದ ಅವಧಿಯಲ್ಲೇ ಚಂದ್ರಮತಿ ಎರಡೂವರೆ ತಿಂಗಳು ಪೂರೈಸಿದ್ದರಿಂದ ಈಗ ಜೈಲು ಶಿಕ್ಷೆ ಅನುಭವಿಸುವ ಅಗತ್ಯ ಇಲ್ಲ.

ಹಿನ್ನೆಲೆ: ಪ್ರಾಮಿಸರಿ ನೋಟಿನ ಆಧಾರದಲ್ಲಿ ಚಂದ್ರಮತಿ, 2002ರ ಜುಲೈನಲ್ಲಿ ಪ್ರಕಾಶ್ ಎಂಬುವವರಿಂದ 4 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ 2 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು.

ದಾವಣಗೆರೆ ನ್ಯಾಯಾಲಯ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ, 5,000 ರೂಪಾಯಿ ದಂಡ ವಿಧಿಸಿತ್ತು. ಪ್ರಕಾಶ್ ಅವರಿಗೆ 2.20 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.