ADVERTISEMENT

ದೇಶೀಯ ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಚಾಲನೆ

ಪಿಟಿಐ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ದೇಶೀಯವಾಗಿ ತಯಾರಿಸುವ ₹15 ಸಾವಿರ ಕೋಟಿ ವೆಚ್ಚದ ಬೃಹತ್‌ ಯೋಜನೆಗೆ ಭಾರತೀಯ ಸೇನೆ ಕೊನೆಗೂ ಒಪ್ಪಿಗೆ ಸೂಚಿಸಿದೆ.

ವಿದೇಶಗಳಿಂದ ಶಸ್ತ್ರಾಸ್ತ್ರ ಆಮದು ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಬರಿದಾಗುತ್ತಿರುವ ಶಸ್ತಾಸ್ತ್ರ ಕೋಠಿಯನ್ನು ಗಣನೆಗೆ ತೆಗೆದುಕೊಂಡು ಸೇನೆ ಈ ನಿರ್ಧಾರ ತೆಗೆದುಕೊಂಡಿದೆ.

ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಸೇನೆಯ ಅಗತ್ಯಕ್ಕೆ ತಕ್ಕಂತೆ ಸ್ಥಳೀಯವಾಗಿ ಯುದ್ಧ ಸಾಮಗ್ರಿ ನಿರ್ಮಿಸುವ ಪ್ರಸ್ತಾಪ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ದೀರ್ಘ ಸಮಾಲೋಚನೆ ನಂತರ ಸೇನೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ADVERTISEMENT

ಈ ಯೋಜನೆಗೆ ದೇಶದ 11 ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ರಕ್ಷಣಾ ಸಚಿವಾಲಯ ಮತ್ತು ಸೇನೆಯ ಹಿರಿಯ ಅಧಿಕಾರಿಗಳ ತೀವ್ರ ಕಣ್ಗಾವಲಿನಲ್ಲಿ ಶಸ್ತ್ರಾಸ್ತ್ರ ನಿರ್ಮಾಣ ಕೆಲಸ ನಡೆಯಲಿದೆ.

30 ದಿನಗಳ ಯುದ್ಧಕ್ಕೆ ಅಗತ್ಯವಿರುವಷ್ಟು ಯುದ್ಧ ಸಾಮಗ್ರಿಗಳನ್ನು ಸ್ಥಳೀಯವಾಗಿ ತಯಾರಿಸುವ ಗುರಿ ಹೊಂದಲಾಗಿದೆ. ಕಾಲಕ್ರಮೇಣ ಶಸ್ತ್ರಾಸ್ತ್ರ ಆಮದು ಕಡಿತಗೊಳಿಸುವ ಉದ್ದೇಶ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಕ್ಷಿಪಣಿ, ಆರ್ಟಿಲರಿ ಗನ್‌, ಕ್ಷಿಪಣಿ ಉಡಾವಣಾ ವಾಹನ, ಯುದ್ಧ ಟ್ಯಾಂಕ್‌ಗಳ ಉತ್ಪಾದನೆ ಆರಂಭವಾಗಲಿದೆ.

ಖಾಲಿ ಸಂಗ್ರಹಾಗಾರ!

* ಸೇನಾ ಕೋಠಿಯಲ್ಲಿ ಕೇವಲ 10 ದಿನಗಳ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಇರುವುದನ್ನು ಮಹಾಲೇಖಪಾಲರ ವರದಿ ಕಳೆದ ವರ್ಷ ಬಹಿರಂಗಗೊಳಿಸಿತ್ತು

* 152 ಬಗೆಯ ಯುದ್ಧ ಸಾಮಗ್ರಿಗಳ ಪೈಕಿ ಕೇವಲ 61 ಬಗೆಯ ಶಸ್ತ್ರಾಸ್ತ್ರಗಳು ಸೇನೆಯ ಬತ್ತಳಕೆಯಲ್ಲಿವೆ ಎಂದು ವರದಿ ಹೇಳಿತ್ತು

* ಸ್ವಯಂಚಾಲಿತ ಬಂದೂಕು ಸೇರಿದಂತೆ ತುರ್ತಾಗಿ ಅಗತ್ಯವಿದ್ದ ಹತ್ತು ಬಗೆಯ ಶಸ್ತ್ರಾಸ್ತ್ರಗಳನ್ನು ನೇರವಾಗಿ ಖರೀದಿಸಲು ಸರ್ಕಾರ ಕಳೆದ ವರ್ಷ ಸೇನೆಗೆ ಅಧಿಕಾರ ನೀಡಿತ್ತು.

* ಸರ್ಕಾರ ಇದಕ್ಕೂ ಮೊದಲು ಯುದ್ಧ ಸಲಕರಣೆ ಖರೀದಿಗೆ ₹40 ಸಾವಿರ ಕೋಟಿಯ ಬೃಹತ್‌ ಯೋಜನೆಗೆ ಅನುಮೋದನೆ ನೀಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.