ADVERTISEMENT

ಧನುಷ್ ಕ್ಷಿಪಣಿ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಬಾಲಸೋರ್ (ಪಿಟಿಐ): ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ `ಧನುಷ್~ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಶುಕ್ರವಾರ ಇಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕ್ಷಿಪಣಿಯು 8.53 ಮೀಟರ್ ಉದ್ದ ಮತ್ತು 0.9 ಮೀಟರ್ ಅಗಲವಿದೆ. 350 ಕಿ.ಮೀ. ದೂರ ಕ್ರಮಿಸಬಲ್ಲ ಇದು 500 ಕೆ.ಜಿ. ಸಾಮರ್ಥ್ಯದ ಸಾಂಪ್ರದಾಯಿಕ ಮತ್ತು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು ಎಂದು ಡಿಆರ್‌ಡಿಒ ವಕ್ತಾರ ರವಿಕುಮಾರ ಗುಪ್ತಾ ತಿಳಿಸಿದ್ದಾರೆ.

ಸಮುದ್ರ ಮತ್ತು ನೆಲದ ಮೇಲೆ ಅತ್ಯಂತ ನಿಖರ ಗುರಿ ಇಡಬಲ್ಲ ಇದು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. ಗುರುವಾರವಷ್ಟೇ ಚಂಡೀಪುರದಲ್ಲಿ ಪೃಥ್ವಿ-2 ದೂರಗಾಮಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆದಿತ್ತು.

ಕ್ಷಿಪಣಿ ಪರೀಕ್ಷಾ ಕೇಂದ್ರಕ್ಕೆ ನಕಾರ

ನವದೆಹಲಿ (ಪಿಟಿಐ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ತಿಲ್ಲಾನ್‌ಚಾಂಗ್‌ನಲ್ಲಿ ಕ್ಷಿಪಣಿ ಪರೀಕ್ಷಾರ್ಥ ಕೇಂದ್ರ ಸ್ಥಾಪಿಸುವ ನೌಕಾಪಡೆಯ ಉದ್ದೇಶಿತ ಪ್ರಸ್ತಾವವನ್ನು ಪರಿಸರ ಸಚಿವಾಲಯ ತಿರಸ್ಕರಿಸಿದೆ.

ಇಲ್ಲಿ ವಾಸವಾಗಿರುವ ಅಳಿವಿನಂಚಿನಲ್ಲಿರುವ ನಿಕೋಬಾರ್ ಮೆಗಾಪೊಡ್ ಪಕ್ಷಿ ಸಂಕುಲಕ್ಕೆ ಅಪಾಯ ಎದುರಾಗಬಹುದೆಂಬ ಕಾರಣಕ್ಕೆ ನೌಕಾಪಡೆಯ ಪ್ರಸ್ತಾವವನ್ನು ಪರಿಸರ ಸಚಿವಾಲಯ ತಿರಸ್ಕರಿಸಲು ಪ್ರಮುಖ ಕಾರಣವಾಗಿದೆ.

`ಮೆಗಾಪೊಡ್ ಪಕ್ಷಿಗಳ ವಾಸಸ್ಥಳಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನೌಕಾಪಡೆಯ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ~ ಎಂದು ಕೇಂದ್ರ ಪರಿಸರ ಸಚಿವೆ ಜಯಂತಿ ನಟರಾಜನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.