ADVERTISEMENT

ನಕಲಿ ಎನ್‌ಕೌಂಟರ್ ಪ್ರಕರಣ: ಉತ್ತರ ಪ್ರದೇಶಕ್ಕೆ ಅಗ್ರ ಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST

ನವದೆಹಲಿ (ಪಿಟಿಐ): ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ನಕಲಿ ಎನ್‌ಕೌಂಟರ್ ನಡೆಸಿ ಕುಖ್ಯಾತಿ ಗಳಿಸಿದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಮಣಿಪುರ ಎರಡನೇ ಸ್ಥಾನದಲ್ಲಿದೆ. 

 2008-09ರಿಂದ ಇಲ್ಲಿಯವರೆಗೆ, ಅಂದರೆ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ನಕಲಿ ಎನ್‌ಕೌಂಟರ್‌ಗಳಲ್ಲಿ 120 ಜನರನ್ನು ಹತ್ಯೆ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿರುವ ಮಣಿಪುರದಲ್ಲಿ 60 ನಕಲಿ ಎನ್‌ಕೌಂಟರ್‌ಗಳು ನಡೆದಿವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ದಾಖಲೆಗಳಿಂದ ತಿಳಿದುಬಂದಿದೆ.

ಇದೇ ಜನವರಿಯಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ಆರು ಜನರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. 2010-11ರಲ್ಲಿ 40 ಜನ, 2008-09 ಮತ್ತು 2009-10ರಲ್ಲಿ 71 ಜನರನ್ನು ಕೊಂದು ಹಾಕಲಾಗಿದೆ ಎಂದು ಆಯೋಗಕ್ಕೆ ದೂರುಗಳು ಬಂದಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ವರ್ಷದಲ್ಲಿ ಒಟ್ಟು 14 ಪ್ರಕರಣಗಳು ನಡೆದಿದ್ದು, ಕಳೆದ ಒಂದೇ ವರ್ಷದ ಅವಧಿಯಲ್ಲಿ 11 ಪ್ರಕರಣಗಳು ದಾಖಲಾಗಿವೆ. ಛತ್ತೀಸ್‌ಗಡದಲ್ಲಿ 11, ಜಾರ್ಖಂಡ್‌ನಲ್ಲಿ 13,  ಒಡಿಶಾದಲ್ಲಿ 12, ಪಶ್ಚಿಮ ಬಂಗಾಳ 23, ದೆಹಲಿಯಲ್ಲಿ 6, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ 15 ನಕಲಿ ಎನ್‌ಕೌಂಟರ್ ಪ್ರಕರಣಗಳು ದಾಖಲಾಗಿವೆ.


ಮೂರು ವರ್ಷಗಳಲ್ಲಿ ದೇಶದಲ್ಲಿ ಇಂತಹ ಒಟ್ಟು 369 ಪ್ರಕರಣಗಳು ನಡೆದಿರುವ ಆರೋಪ ಕೇಳಿಬಂದಿದೆ. ಆಯೋಗ ನಡೆಸಿದ ವಿಚಾರಣೆಯಲ್ಲಿ ಆ ಪೈಕಿ 90 ಪ್ರಕರಣಗಳಲ್ಲಿ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನೂ 271 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT