ADVERTISEMENT

ನಾಟಕಕಾರ ಗಿರೀಶ್ ಕಾರ್ನಾಡ್ ಶ್ಲಾಘನೆ: ರಾಮಾನುಜನ್ ನೈಜ ಚಿಂತಕ, ಅನನ್ಯ ಅನುವಾದಕ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ನವದೆಹಲಿ: `ಎ.ಕೆ. ರಾಮಾನುಜನ್ ನನಗೆ ತಿಳಿದಂತೆ ಅತ್ಯಂತ ನೈಜ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ಬದುಕಿದ್ದಿದ್ದರೇ ತಮ್ಮ ಪ್ರಬಂಧವೊಂದು ಇಷ್ಟೊಂದು ವಿವಾದಕ್ಕೆ ಕಾರಣವಾಗಿದ್ದು ಅವರ ಅಚ್ಚರಿಗೆ ಕಾರಣವಾಗುತ್ತಿತ್ತು. ಇದಕ್ಕಿಂತ ಗಂಭೀರವಾದ ಹಲವು ಪ್ರಬಂಧಗಳನ್ನು ಅವರು ಮಂಡಿಸಿದ್ದರು~ ಎಂದು ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ದೆಹಲಿಯ ರಾಮ್ಜಾಸ್ ಕಾಲೇಜಿನ ಇತಿಹಾಸ ಸೊಸೈಟಿಯಲ್ಲಿ ಏರ್ಪಡಿಸಿದ್ದ  ರಾಮಾನುಜನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಕಾರ್ನಾಡ್,  ರಾಮಾನುಜನ್ ಅವರ `ತ್ರಿ ಹಂಡ್ರಂಡ್ ರಾಮಾಯಣಾಸ್~ ಪ್ರಬಂಧ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಮಾನುಜನ್ ಅವರ `ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಚಾರಗಳಿವೆ ಎಂದು ದೆಹಲಿ ವಿಶ್ವವಿದ್ಯಾಲಯ ಅದನ್ನು ಪದವಿ ತರಗತಿಯ ಇತಿಹಾಸ ಪಠ್ಯದಿಂದ ತೆಗೆದುಹಾಕಲು ಮಂಗಳವಾರವಷ್ಟೇ ನಿರ್ಧಾರ ತೆಗೆದುಕೊಂಡಿದೆ.

ಉಪನ್ಯಾಸದ ಉದ್ದಕ್ಕೂ ರಾಮಾನುಜನ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡ ಕಾರ್ನಾಡ್, ಅವರೊಬ್ಬ ಅದ್ಭುತ ಕಥನಗಾರ. ಅತ್ಯುತ್ತಮ ಅನುವಾದಕ. ಜಾನಪದ ಕಣಜ ಎಂದು ಶ್ಲಾಘಿಸಿದರು.

ಆದರೆ, ತಮ್ಮ ಮಾತುಗಳಲ್ಲಿ ವಿವಾದಾತ್ಮಕ ಪ್ರಬಂಧದ ಕುರಿತು ಹೆಚ್ಚೇನೂ ಹೇಳದ ಕಾರ್ನಾಡ್, `ರಾಮಾಯಣದ ಹಿಂದಿ ಅವತರಣಿಕೆ `ರಾಮಚರಿತ ಮಾನಸ~ವನ್ನು ಹೆಚ್ಚಾಗಿ ಓದಿಕೊಂಡ ಜನರಿರುವ ಪ್ರದೇಶದಲ್ಲಿ ವಾಲ್ಮೀಕಿಯ ಸಂಸ್ಕೃತ ರಾಮಾಯಣದಿಂದ ಉದ್ಧರಿಸಲಾದ ಕೆಲ ಸಾಲುಗಳು ಸಮಸ್ಯೆಗೆ ಕಾರಣವಾಗಿರುವುದು ಹಾಗೂ ಆ ಕೃತಿಯ ನಿಷೇಧಕ್ಕೆ ಕಾರಣವಾಗಿರುವುದು ಅಚ್ಚರಿ ಹುಟ್ಟಿಸುವಂತಿದೆ~ ಎಂದರು.

ರಾಮಾನುಜನ್ ಅವರ ಅನುವಾದ ಸಾಮರ್ಥ್ಯದ ಬಗ್ಗೆ ಹೊಗಳಿದ ಗಿರೀಶ್, `ಅವರೊಬ್ಬ ಕವಿಯಾಗಿದ್ದರಿಂದ ಕಾವ್ಯಾತ್ಮಕವಾಗಿ ಅನುವಾದ ಮಾಡುತ್ತಿದ್ದರು. ತಮಿಳಿನ `ಸಂಗಂ~ ಕಾವ್ಯ ಅವರಿಂದಾಗಿ ನಮಗೆ ದಕ್ಕಿದೆ. ವಚನ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸುವ ಮೂಲಕ ಅದರ ಮಹತ್ವ ಸಾರಿದರು~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.