ADVERTISEMENT

ಪಂಚಾಯತ್‌ರಾಜ್ ವ್ಯವಸ್ಥೆ ಬಲಪಡಿಸಿ: ಪ್ರಧಾನಿ ಸಿಂಗ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಅಧಿಕಾರಿಗಳು ತಮಗಿರುವ ಅಧಿಕಾರವನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಜತೆ ಮುಕ್ತವಾಗಿ ಹಂಚಿಕೊಳ್ಳಲು ಇನ್ನೂ ಮಾನಸಿಕವಾಗಿ ಸಿದ್ಧರಿಲ್ಲದ ಕಾರಣ ಪಂಚಾಯತ್‌ರಾಜ್ ವ್ಯವಸ್ಥೆ ನೈಜ ರೂಪದಲ್ಲಿ ಕೆಲಸ ಮಾಡುವುದು ಈಗಲೂ ಸಾಧ್ಯವಾಗುತ್ತಿಲ್ಲ  ಎಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಡಾ. ಮನಮೋಹನ ಸಿಂಗ್, ಇದಕ್ಕಾಗಿ `ಮನಸ್ಥಿತಿಯಲ್ಲಿ ತಕ್ಷಣದ ಬದಲಾವಣೆ' ಆಗಬೇಕಾದ್ದು ಅಗತ್ಯ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಪಂಚಾಯತ್‌ರಾಜ್ ದಿನದ ಅಂಗವಾಗಿ ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಆಗಮಿಸಿದ್ದ ಪಂಚಾಯತ್ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಸಿಂಗ್, `ಪಂಚಾಯತ್‌ರಾಜ್ ಸಂಸ್ಥೆಗಳು ನೈಜರೂಪದಲ್ಲಿ ಕಾರ್ಯನಿರ್ವಹಿಸುವಂತಾಗಲು ಅವುಗಳಿಗೆ ಮತ್ತಷ್ಟು ಅಧಿಕಾರ, ಜವಾಬ್ದಾರಿಗಳನ್ನು ನೀಡಬೇಕಾಗಿದೆ' ಎಂದರು. `ಆಡಳಿತದ ವಿಕೇಂದ್ರಿಕರಣದ ಜತೆಗೆ ಆಡಳಿತದಲ್ಲಿ ಪಾಲ್ಗೊಳ್ಳುವ ಜನರ ಹಕ್ಕು ಚಲಾಯಿಸುವುದು ಪಂಚಾಯತ್‌ರಾಜ್ ಉದ್ದೇಶವಾಗಿದೆ. ಇದಾಗಬೇಕಾದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ, ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ' ಎಂದರು.

ಚುನಾಯಿತ ಪ್ರತಿನಿಧಿಗಳ ಜತೆಗೆ ಅಧಿಕಾರವನ್ನು ಹಂಚಿಕೊಳ್ಳುವ ವಿಷಯದಲ್ಲಿ ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ಈಗಲೂ ಮಾನಸಿಕವಾಗಿ ಸಿದ್ಧರಿಲ್ಲ ಎನ್ನುವ ದೂರಗಳು ತಮಗೆ ಪದೇ ಪದೇ ಬರುತ್ತಿದ್ದು, ಇಂತಹ ಸ್ಥಿತಿ ದೂರವಾಗುವ ಮನಸ್ಥಿತಿ ನಮ್ಮದಾಗಬೇಕು ಎಂದರು.

ಅಭಿವೃದ್ಧಿಯಲ್ಲಿ ಸ್ಥಳೀಯ ಸರ್ಕಾರಗಳ ಕೊಡುಗೆ ಮಹತ್ತರವಾಗಿದ್ದರೂ ಇದೆಲ್ಲವೂ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಜನಪ್ರತಿನಿಧಿಯ ಸಾಮರ್ಥ್ಯದ ಜತೆಗೆ ಅಧಿಕಾರದ ವಿಕೇಂದ್ರಿಕರಣ ಈ ಯಶಸ್ಸನ್ನು ನಿರ್ಧರಿಸುತ್ತವೆ ಎಂದರು.

12ನೇ ಪಂಚವಾರ್ಷಿಕ ಯೋಜನೆಯಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳ ಬಲವರ್ಧನೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹತ್ತುಪಟ್ಟು ಹೆಚ್ಚಿನ ಹಣ ನೀಡಿದೆ. 11ನೇ ಯೋಜನೆಯಡಿ ರೂ. 660 ಕೋಟಿ ಬಿಡುಗಡೆ ಮಾಡಲಾಗಿದ್ದರೆ 12ನೇ ಯೋಜನೆಯಲ್ಲಿ ರೂ. 6437 ಕೋಟಿ ನೀಡಲಾಗಿದೆ. 

`ಪಂಚಾಯತ್‌ರಾಜ್ ಕಾಮಗಾರಿಗಳಲ್ಲಿ ಜನರ ಸಹಭಾಗಿತ್ವ ಈಗ ಹೆಚ್ಚಾಗಿದ್ದು ಜನರ ಆಶಯಗಳಿಗೆ ಅನುಗುಣವಾಗಿ ವೆಚ್ಚಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ, ರಾಜಕೀಯವಾಗಿ ಜನ ಈಗ ಹೆಚ್ಚು ಜಾಗೃತರಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.