ADVERTISEMENT

ಪತ್ರಕರ್ತೆ ಮೇಲೆ ರೇಗಿದ ಮಮತಾ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:25 IST
Last Updated 2 ಫೆಬ್ರುವರಿ 2011, 18:25 IST

ಕೋಲ್ಕತ್ತ (ಐಎಎನ್‌ಎಸ್): ಪತ್ರಕರ್ತೆಯೊಬ್ಬರಿಂದ ಮುಜುಗರವಾಗುವಂತಹ ಪ್ರಶ್ನೆಯನ್ನು ಎದುರಿಸಿದ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ತಾಳ್ಮೆ ಕಳೆದುಕೊಂಡು, ರೇಗಿದರಲ್ಲದೇ, ‘ಪಶ್ಚಿಮ ಬಂಗಾಳದ ಆಡಳಿತರೂಢ ಮಾರ್ಕ್ಸಿಸ್ಟ್ ಪಕ್ಷದ ಮುಖವಾಣಿಯಾಗಬೇಕಿಲ್ಲ’ ಎಂದು ಮಂಗಳವಾರ ಹೇಳಿದರು.

ರೈಲ್ವೆ ಇಲಾಖೆಯು ಜಾಹೀರಾತುಗಳಿಗೆ ಅನಗತ್ಯ ಹಣ ದುಂದುವೆಚ್ಚ ಮಾಡುತ್ತಿದೆ ಎಂಬ ಎಡಪಕ್ಷಗಳ ಆರೋಪದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ವರದಿಗಾರ್ತಿ ಪ್ರಶ್ನೆಯಿಂದ ಕೋಪಗೊಂಡ ಮಮತಾ, ‘ಯಾವ ಮಾಧ್ಯಮವನ್ನು ಪ್ರತಿನಿಧಿಸುತ್ತಿದ್ದೀರಿ ತಿಳಿಸಿ’ ಎಂದರು. ಇದಕ್ಕೆ ಆಕೆಯಿಂದ ಉತ್ತರ ಬಂದ ನಂತರ ಪುನಃ ಪ್ರಶ್ನೆ ಕೇಳಿ ಎಂದು ಮಮತಾ ಹೇಳಿದರು.

ರೈಲ್ವೆ ಇಲಾಖೆ ದಿವಾಳಿಯಾಗಿದೆ. ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಲು ಹಣದ ಕೊರತೆ ಎದುರಿಸುತ್ತಿದೆ ಎಂದು ಸಿಪಿಐಎಂ ಮತ್ತು ಎಡಪಂಥೀಯ ಪಕ್ಷಗಳು ಆರೋಪಿಸಿವೆ ಎಂದು ವರದಿಗಾರ್ತಿ ಪುನಃ ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಮಮತಾ, ‘ನಿಮ್ಮ ಮಾಧ್ಯಮ ಸ್ನೇಹಿತರನ್ನು ನಿನ್ನೆ ಮಿಡ್ನಾಪುರದಲ್ಲಿ ಹೊಡೆದಿದ್ದಾರೆ. ಕಮ್ಯುನಿಸ್ಟರು ಅಲ್ಲಿ ಏನು ಮಾಡುತ್ತಿದ್ದಾರೆ? ಈ ಬಗ್ಗೆ ನಿನ್ನೆ ಏಕೆ ಕೇಳಲಿಲ್ಲ’ ಎಂದರು.

‘ಪ್ರಕಟಿಸಿರುವ ಉದ್ದೇಶಿತ ಯೋಜನೆಗಳ ವೆಚ್ಚದ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಂದು ಯೋಜನೆ ಮತ್ತು ವೆಚ್ಚದ ಕುರಿತು ರೈಲ್ವೆ ಬಜೆಟ್‌ನಲ್ಲಿ ವಿವರಿಸಲಾಗಿದ್ದು, ಅದನ್ನೊಮ್ಮೆ ಪರಿಶೀಲಿಸುವಂತೆ’     ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.