ADVERTISEMENT

ಪೋಸ್ಟಲ್ ಆರ್ಡರ್ ಅಂಗೀಕರಿಸದಿದ್ದರೆ ದಂಡ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆಯಲು ಶುಲ್ಕವಾಗಿ ಪೋಸ್ಟಲ್ ಆರ್ಡರ್ ಅಂಗೀಕರಿಸಲು ಒಪ್ಪದ ಅಧಿಕಾರಿಗಳಿಗೆ ಸರ್ಕಾರ ದಂಡ ವಿಧಿಸಲು ನಿರ್ಧರಿಸಿದೆ.ಈ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ.

ಕೆಲ ಅಧಿಕಾರಿಗಳು ಪೋಸ್ಟಲ್ ಆರ್ಡರ್ ಮೂಲಕ ಸಲ್ಲಿಸಿದ ಶುಲ್ಕವನ್ನು ಒಪ್ಪುತ್ತಿಲ್ಲ ಎಂದು ಈ ಇಲಾಖೆಯ ಗಮನಕ್ಕೆ ತರಲಾಗಿದೆ.‘ಭಾರತೀಯ ಪೋಸ್ಟಲ್ ಆರ್ಡರ್ ಮೂಲಕ ಬಂದ ಶುಲ್ಕವನ್ನು ಒಪ್ಪದಿದ್ದಲ್ಲಿ ಅದನ್ನು ಅರ್ಜಿ ಸ್ವೀಕರಿಸಲು ನಿರಾಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಂಬಂಧಪಟ್ಟ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕೇಂದ್ರ ಮಾಹಿತಿ ಆಯೋಗ ದಂಡ ವಿಧಿಸಬೇಕಾಗುತ್ತದೆ’ ಎಂದು ಕೇಂದ್ರ  ಸರ್ಕಾರ ಎಲ್ಲಾ ಸಚಿವಾಲಯಕ್ಕೆ ಅಥವಾ ಇಲಾಖೆಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
 
‘ಆದ್ದರಿಂದ ಎಲ್ಲಾ ಸಾರ್ವಜನಿಕ ಅಧಿಕಾರಿಗಳು  ಪೋಸ್ಟಲ್ ಆರ್ಡರ್ ಮೂಲಕ ಸಲ್ಲಿಸಿದ ಶುಲ್ಕವನ್ನು ನಿರಾಕರಿಸುವಂತಿಲ್ಲ’ ಎಂದು ಅದು ತಿಳಿಸಿದೆ. ಸರ್ಕಾರಿ ಇಲಾಖೆಗಳಿಂದ  ಯಾರೇ ಆದರೂ ಮಾಹಿತಿ ಕಾಯಿದೆಯಡಿ ರೂ. 10ನ್ನು ನಗದು ಅಥವಾ ಡಿಡಿ ಅಥವಾ ಚೆಕ್  ಅಥವಾ ಪೋಸ್ಟಲ್ ಆರ್ಡರ್ ಮೂಲಕ ನೀಡಿ ಮಾಹಿತಿ ಕೇಳಬಹುದಾಗಿದೆ ಎಂದು ಅದು ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.