ADVERTISEMENT

ಪ್ರತಿ ವರ್ಷ ಘಟಿಕೋತ್ಸವ ಕಡ್ಡಾಯ: ವಿ.ವಿಗಳಿಗೆ ಪತ್ರ

ಪಿಟಿಐ
Published 17 ಜೂನ್ 2018, 19:30 IST
Last Updated 17 ಜೂನ್ 2018, 19:30 IST

ನವದೆಹಲಿ: ದೇಶದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಕಡ್ಡಾಯವಾಗಿ ಘಟಿಕೋತ್ಸವ ಆಯೋಜಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಸಂಬಂಧ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದೆ.

ಕೆಲವು ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಘಟಿಕೋತ್ಸವ ಆಯೋಜಿಸದೆ ಇರುವುದು ಸರಿಯಲ್ಲ. ಇನ್ನು ಮುಂದೆ ನಿಯಮಿತವಾಗಿ ಘಟಿಕೋತ್ಸವ ಕಾರ್ಯಕ್ರಮ ಏರ್ಪಡಿಸಿ ಪದವೀಧರರಿಗೆ ಪ್ರಮಾಣ ‍ಪತ್ರಗಳನ್ನು ನೀಡಬೇಕು. ಇದರಿಂದ ಅವರನ್ನು ಗೌರವಿಸಿದಂತೆ ಆಗುತ್ತದೆ. ಅಲ್ಲದೆ ಅವರ ಕುಟುಂಬದವರಿಗೂ ಇದು ಹೆಮ್ಮೆಯ ಕ್ಷಣ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದೆ ಯಾವಾಗ ಘಟಿಕೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು ಎಂಬ ಮಾಹಿತಿ ನೀಡುವಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ. ಆರ್ಥಿಕ ತೊಂದರೆ ಅಥವಾ ಸಮಯದ ಅಭಾವದಿಂದಾಗಿ ಕೆಲವು ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಘಟಿಕೋತ್ಸವ ಆಯೋಜಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯವು ಐದು ವರ್ಷಗಳ ನಂತರ ಮೇ ತಿಂಗಳಲ್ಲಿ ಹಾಗೂ ತ್ರಿಪುರಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ನಂತರ ಘಟಿಕೋತ್ಸವ ಆಯೋಜಿಸಿ ಪದವೀಧರರಿಗೆ ಪ್ರಮಾಣ‍ಪತ್ರಗಳನ್ನು ವಿತರಿಸಿತ್ತು.

46 ವರ್ಷಗಳ ಹಿಂದೆ ಮೊದಲ ಘಟಿಕೋತ್ಸವ ಆಯೋಜಿಸಿದ್ದ ದೆಹಲಿಯ ಜವಾಹರಲಾಲ್‌ ನೆಹರೂ ವಿ.ವಿ (ಜೆಎನ್‌ಯು), ಈ ವರ್ಷ ಎರಡನೇ ಘಟಿಕೋತ್ಸವ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.