ADVERTISEMENT

ಬಂಗಾಳದ ಕವಿ ಶಂಖ ಘೋಷ್‌ಗೆ ಜ್ಞಾನಪೀಠ

ಪಿಟಿಐ
Published 23 ಡಿಸೆಂಬರ್ 2016, 19:30 IST
Last Updated 23 ಡಿಸೆಂಬರ್ 2016, 19:30 IST
ಬಂಗಾಳದ ಕವಿ ಶಂಖ ಘೋಷ್‌ಗೆ ಜ್ಞಾನಪೀಠ
ಬಂಗಾಳದ ಕವಿ ಶಂಖ ಘೋಷ್‌ಗೆ ಜ್ಞಾನಪೀಠ   

ನವದೆಹಲಿ: ಬಂಗಾಳದ ಹಿರಿಯ ಕವಿ ಶಂಖ ಘೋಷ್ ಅವರಿಗೆ ಈ ಸಾಲಿನ ಜ್ಞಾನಪೀಠ ಪ್ರಶಸ್ತಿ ಗೌರವ ಸಂದಿದೆ.

‘ಆಧುನಿಕ ಕಾವ್ಯ ಪ್ರಕಾರಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಬಂಗಾಳಿ ಕವಿ ಶಂಖ ಘೋಷ್ ಅವರನ್ನು 52ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾವ್ಯ ಮತ್ತು ವಿಮರ್ಶೆ ಪ್ರಕಾರಗಳಲ್ಲಿ ಘೋಷ್ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗುತ್ತಿದೆ’ ಎಂದು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ರವೀಂದ್ರನಾಥ ಟ್ಯಾಗೋರ್ ಅವರ ಬರಹಗಳ ಬಗ್ಗೆ ಹೆಚ್ಚು ಅಧಿಕಾರಯುತವಾಗಿ ಮಾತಾಡಬಲ್ಲ ಬಂಗಾಳಿ ಕವಿಗಳ ಸಾಲಿನಲ್ಲಿ ಶಂಖ ಘೋಷ್ (84) ಅವರ ಹೆಸರು ಮೊದಲು ಕೇಳಿಬರುತ್ತದೆ.

ಯುವಕವಿಗಳ ಮಾದರಿ ಘೋಷ್
ಟ್ಯಾಗೋರರ ಕವಿತೆ, ಕಥೆಗಳ ಬಗ್ಗೆ ಘೋಷ್ ಅವರು ಸಾಕಷ್ಟು ವಿಮರ್ಶೆಗಳನ್ನು ಬರೆದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರ ಸಾಹಿತ್ಯ ಅಧ್ಯಯನದ ಹರಿವು ವಿಸ್ತಾರವಾದುದು. ಆದರೆ ವಿಮರ್ಶೆಗಿಂತಲೂ ಕಾವ್ಯಕೃಷಿಯಲ್ಲಿ ಅವರದ್ದು ದೊಡ್ಡ ಹೆಸರು.

ADVERTISEMENT

ಆಧುನಿಕೋತ್ತರ ಬಂಗಾಳ ಸಾಹಿತ್ಯದಲ್ಲಿ ಹೊಸ ಕಾವ್ಯ ಪ್ರಕಾರಕ್ಕೆ ಮುನ್ನುಡಿ ಬರೆದ ಹೆಗ್ಗಳಿಕೆ ಘೋಷ್‌ ಅವರ ಹೆಸರಿನಲ್ಲೇ ಇದೆ. ಕವಿತೆ ಸಾರ್ವತ್ರಿಕವಾದುದು. ಹೀಗಾಗಿ ಅವುಗಳಲ್ಲಿ ಕಾಲ ಮತ್ತು ದೇಶಗಳ ವಿವರಣೆ ಗೌಣವಾಗಿರುತ್ತದೆ. ಒಂದೊಮ್ಮೆ ಕವಿತೆಗಳಲ್ಲಿ ಕಾಲ, ದೇಶಗಳ ವಿವರಣೆ ಸೇರಿಸಿದ್ದಲ್ಲಿ ಅವುಗಳ ಸಾರ್ವತ್ರಿಕತೆಗೆ ಧಕ್ಕೆಯಾಗುತ್ತದೆ. ಘೋಷ್‌ ಅವರ ಕವಿತೆಗಳಲ್ಲಿ ಕಾಲ, ದೇಶಗಳ ವಿವರಣೆ ನಿಚ್ಚಳವಾಗಿರುತ್ತದೆ. ಇವುಗಳ ಜತೆಯಲ್ಲೇ ಅವರ ಕವಿತೆಗಳು ಸಾರ್ವತ್ರಿಕತೆಯನ್ನು ಉಳಿಸಿಕೊಂಡಿವೆ ಎಂಬುದು ವಿಮರ್ಶಕರ ಅಭಿಪ್ರಾಯ.

ಸಾಮಾಜಿಕ ವಿಡಂಬನೆ ಅವರ ಬಹುತೇಕ ಕವಿತೆಗಳ ವಸ್ತು. ಅವರ  ಒಂದು ಕವಿತೆಯಲ್ಲಿ, ಜನರು  ಸಮಾಜದ ಎದುರು ಮುಖವಾಡ ತೊಟ್ಟು ಅಭಿನಯಿಸುತ್ತಾರೆ. ಮತ್ಯಾರನ್ನೋ ಮೆಚ್ಚಿಸಲು ಬದುಕುತ್ತಾರೆ. ಆದರೆ ಅದು ಬದುಕಾಗದೆ ಕೇವಲ ಕೂಲಿಯಾಗುತ್ತದೆ ಎಂದು ವಿಡಂಬಿಸಿದ್ದಾರೆ. ಆದರೆ ಇದನ್ನು ಅವರು ನೇರವಾಗಿ ಬರೆಯುವುದಿಲ್ಲ. ಬದಲಿಗೆ ಸಂಕೇತ ಮತ್ತು ಪ್ರತಿಮೆಗಳ ಮೂಲಕವೇ ಇಡೀ ವಸ್ತುವನ್ನು ಕವಿತೆಯಾಗಿಸಿದ್ದಾರೆ. ಆಕ್ರೋಶವೇ ತುಂಬಿದ್ದರೂ ಅವರ ಕವಿತೆಗಳು ಗೀತಾತ್ಮಕವಾಗಿವೆ. ಅವರ ‘ದಿನ್‌ಗೂಲಿ, ರಾತ್‌ಗೂಲಿ’ ಕವಿತೆ ಆಧುನಿಕೋತ್ತರ ಬಂಗಾಳ ಸಾಹಿತ್ಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಅದನ್ನು ಹಲವು ಯುವಕವಿಗಳು ಅನುಸರಿಸಿದರು ಎಂದು ವಿಮರ್ಶಕರು ಒಪ್ಪಿಕೊಳ್ಳುತ್ತಾರೆ.

1932ರಲ್ಲಿ ಚಾಂಡ್‌ಪುರ್‌ನಲ್ಲಿ (ಬಾಂಗ್ಲಾದೇಶದಲ್ಲಿದೆ) ಜನಿಸಿದರು. ಅವರ ಕವಿತೆ, ವಿಮರ್ಶೆಗಳಿಗೆ ಹಲವು ಪ್ರಶಸ್ತಿ ಮತ್ತು ಗೌರವ ಸಂದಿವೆ. ಅವರು ಸಾಹಿತ್ಯ ಅಕಾಡೆಮಿ ಪುರಸ್ಕಾರ, ಸರಸ್ವತಿ ಸಮ್ಮಾನ್‌ ಮತ್ತಿತರ ಅತ್ಯುನ್ನತ ಗೌರವಗಳಿಗೆ ಭಾಜನರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.