ADVERTISEMENT

ಬಿಎಸ್‌ವೈ ಸುತ್ತ ಮತ್ತೆ ಗಣಿ ಕುಣಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ: ಜಿಂದಾಲ್ ಮೂಲದ `ಜೆಎಸ್‌ಡಬ್ಲ್ಯು~ ಕಂಪೆನಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು `ದೇಣಿಗೆ~ ಪಡೆದಿದ್ದಾರೆಂಬ ಆರೋಪ ಹಾಗೂ `ಅದಾನಿ ಎಂಟರ್‌ಪ್ರೈಸಸ್~ ಮತ್ತು ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆನ್ನಲಾದ `ಬೇಲಿಕೇರಿ ಬಂದರಿನ ಅದಿರು ಕಣ್ಮರೆ ಪ್ರಕರಣ~ ಕುರಿತು ಕೇಂದ್ರ ತನಿಖಾ ದಳ (ಸಿಬಿಐ)ದ ತನಿಖೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ)ಗೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿತು.

ಅಕ್ರಮ ಗಣಿಗಾರಿಕೆ ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠವು ಪಿ.ವಿ. ಜಯಕೃಷ್ಣ ನೇತೃತ್ವದ ಸಿಇಸಿಗೆ ನಿರ್ದೇಶನ ನೀಡಿತು. ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ `ಅಕ್ರಮ ಗಣಿಗಾರಿಕೆ ಕುಣಿಕೆ~ ಮತ್ತೊಮ್ಮೆ ಯಡಿಯೂರಪ್ಪನವರ ಕೊರಳಿಗೆ ಸುತ್ತಿಕೊಂಡಿದೆ. ಸಿಇಸಿ ಮಾಡಲಿರುವ ಶಿಫಾರಸಿನ ಮೇಲೆ ಮಾಜಿ ಮುಖ್ಯಮಂತ್ರಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಧಾರವಾಡದ ಎಸ್. ಆರ್.ಹಿರೇಮಠ ಅವರ `ಸಮಾಜ ಪರಿವರ್ತನಾ ಸಮುದಾಯ~ ಜನವರಿ 16ರಂದು ಸಲ್ಲಿಸಿದ ಮಧ್ಯಂತರ ಅರ್ಜಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರ ಮೇಲೆ ಹಣ ಪಡೆದ ಆರೋಪ ಮಾಡಿದೆ. ಜೆಎಸ್‌ಡಬ್ಲ್ಯು ತನ್ನದೇ `ಸೌತ್‌ವೆಸ್ಟ್~ ಕಂಪೆನಿ ಮೂಲಕ ಹಣ ಪಾವತಿಸಿದೆ ಎಂದೂ ಹೇಳಿದೆ.

ಅಲ್ಲದೆ, ಬೇಲಿಕೇರಿ ಬಂದರಿನಿಂದ 5.5 ಲಕ್ಷ ಟನ್ ಅದಿರು ಕಣ್ಮರೆಯಾದ ಪ್ರಕರಣದ ಹಿಂದೆ `ಅದಾನಿ ಎಂಟರ್‌ಪ್ರೈಸಸ್~ ಮತ್ತು ಕೆಲವು ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪವನ್ನು ಮಾಡಿದೆ. ಈ ಬಗೆಗಿನ ಎಲ್ಲ ಸತ್ಯಾಂಶಗಳು ಬೆಳಕಿಗೆ ಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕೆಂದು ಮನವಿ ಮಾಡಿದೆ. ಈ ಸಂಬಂಧದ ಎಲ್ಲ ದಾಖಲೆಗಳು ಮತ್ತು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಾ.ಯು.ವಿ.ಸಿಂಗ್ ವರದಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸಮಾಜ ಪರಿವರ್ತನಾ ಸಮುದಾಯದ ಮಧ್ಯಂತರ ಅರ್ಜಿ ಹಾಗೂ ಅಕ್ರಮ ಗಣಿಗಾರಿಕೆ ಕುರಿತು ಸಿಇಸಿ ಸೋಮವಾರ ಸಲ್ಲಿಸಿದ ಅಂತಿಮ ವರದಿಯನ್ನು ಅರಣ್ಯ ಪೀಠ ಪರಿಶೀಲಿಸಿದ ಬಳಿಕ ಈ ಸೂಚನೆ ನೀಡಿತು. ಅರ್ಜಿದಾರರ ಆರೋಪದಲ್ಲಿ ಹುರುಳಿದೆಯೇ ಎಂಬ ಬಗ್ಗೆ ಸಿಇಸಿ ಪರಿಶೀಲಿಸಲಿದೆ.

`ಜೆಎಸ್‌ಡಬ್ಲ್ಯು~ ತನ್ನ ಸ್ವಂತ ಬಳಕೆಗೆ ಅಗತ್ಯವಿರುವ ಅದಿರಿಗಾಗಿ ಗಣಿ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದ ಅನುಕೂಲ ಪಡೆಯಲು ಮುಖ್ಯಮಂತ್ರಿ ಕುಟುಂಬದ ಸದಸ್ಯರಿಗೆ ಹಣ ಪಾವತಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪ ಕುರಿತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ 24 ದಿನ ಜೈಲಿನಲ್ಲಿದ್ದು ಹೊರ ಬಂದಿದ್ದಾರೆ. ಪ್ರಕರಣದ ತನಿಖೆಗೆ ಸಹಕರಿಸಬೇಕಾದ ಸರ್ಕಾರ ಸಮರ್ಥ ಅಧಿಕಾರಿಗಳನ್ನು ಅವಧಿಗೆ ಮೊದಲೇ ವರ್ಗಾವಣೆ ಮಾಡುವ ಮೂಲಕ ದುರ್ಬಲಗೊಳಿಸಲು ಹೊರಟಿದೆ. ಇದಕ್ಕೆ ಜ್ವಲಂತ ಉದಾಹರಣೆ ಜೀವನ್ ಕುಮಾರ್ ಗಾಂವಕರ್ ಮತ್ತು ಪ್ರಣವ್ ಮೊಹಾಂತಿ ವರ್ಗಾವಣೆ. ಇವರ ಜಾಗಕ್ಕೆ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಧ್ಯಂತರ ಅರ್ಜಿಯಲ್ಲಿ ವಿವರಿಸಲಾಗಿದೆ.

ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 5.5 ಲಕ್ಷ ಟನ್ ಅದಿರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಈ ಅದಿರನ್ನು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ತೆಗೆಯಲಾಗಿತ್ತು. ವಶಪಡಿಸಿಕೊಂಡ ಅದಿರಿನಲ್ಲಿ ಬಹಳಷ್ಟನ್ನು `ಅಸೋಸಿಯೇಟ್ ಮೈನಿಂಗ್ ಕಂಪೆನಿ~ ಪೂರೈಸಿತ್ತು. ಸಿಇಸಿ 2011ರ ಸೆ. 21ರ ವರದಿಯಲ್ಲಿ ಇದು ಎಎಂಸಿ  ಗಣಿ ಪ್ರದೇಶದಿಂದ ಬಂದಿರಲು ಸಾಧ್ಯವಿಲ್ಲ. ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೆಗೆದಿರುವುದು ಎಂದು ಹೇಳಿದೆ.

ಅದಿರು ಕಳ್ಳತನದಲ್ಲಿ ಅದಾನಿ ಎಂಟರ್‌ಪ್ರೈಸಸ್ ಕೈವಾಡವಿದೆ. ಬಂದರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಈ ಸಹಕಾರಕ್ಕಾಗಿ ಹಣ ಪಡೆದಿದ್ದಾರೆ. ಯಾರ‌್ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬ ವಿವರ ಲೋಕಾಯುಕ್ತ ದಾಖಲೆಯಲ್ಲಿದೆ. ಅದಿರು ಕಳವಾದ ಸಮಯದಲ್ಲಿ ಎಎಂಸಿ ಮಾಲೀಕರಾದ ಜಿ. ಜನಾರ್ದನರೆಡ್ಡಿ ರಾಜ್ಯದ ಸಚಿವರಾಗಿದ್ದರು ಎಂದು ಸಮಾಜ ಪರಿವರ್ತನಾ ಸಮುದಾಯ ಅರ್ಜಿಯಲ್ಲಿ ಉಲ್ಲೇಖಿಸಿದೆ.

`ಆರೋಪದಲ್ಲಿ ಸತ್ಯಾಂಶವಿದ್ದು ಸಿಬಿಐ ತನಿಖೆ ಅಗತ್ಯವಿದೆ ಎಂದು ಸಿಇಸಿ ಶಿಫಾರಸು ಮಾಡಿದರೆ ಅದನ್ನು ಒಪ್ಪಿಕೊಳ್ಳುವ ಅಥವಾ ಬಿಡುವ ಸ್ವಾತಂತ್ರ್ಯ ನ್ಯಾಯಾಲಯಕ್ಕೆ ಬಿಟ್ಟಿದ್ದು~ ಎಂದು ಗಣಿ ಕಂಪೆನಿಗಳ ವಕೀಲ ಫಣೀಂದ್ರ ಅನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅಸೋಸಿಯೇಟ್ ಮೈನಿಂಗ್ ಕಂಪೆನಿ (ಎಎಂಸಿ) ಹಾಗೂ ಡೆಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸಿಇಸಿ ಮಾಡಿದ ಶಿಫಾರಸನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಆರೋಪ ಕುರಿತು ಪರಿಶೀಲನೆ ನಡೆಸಲು ಸಿಇಸಿಗೆ ಸೂಚಿಸಿರುವ ಬಗ್ಗೆ ಎಸ್.ಆರ್. ಹಿರೇಮಠ ಸಂತಸ ವ್ಯಕ್ತಪಡಿಸಿದರು. ನ್ಯಾಯಾಲಯದ ಈ ಕ್ರಮದಿಂದ ರಾಜ್ಯದ ಜನರಿಗೆ ನ್ಯಾಯ ಸಿಗಲಿದೆ ಎಂದರು.

ವರ್ಗೀಕರಣಕ್ಕೆ ಆಕ್ಷೇಪ:
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿ ಸೋಮವಾರ ಸಲ್ಲಿಸಿರುವ ತನ್ನ ಅಂತಿಮ ವರದಿಯಲ್ಲಿ ಗಣಿ ಗುತ್ತಿಗೆಗಳನ್ನು ಮೂರು ವಿಭಾಗಳಾಗಿ ವರ್ಗೀಕರಣ ಮಾಡಿರುವುದು ಸರಿಯಿಲ್ಲ. ಶೇ. 10ರಷ್ಟು ಪ್ರದೇಶ ಒತ್ತುವರಿಯಾಗಿದ್ದರೂ `ಬಿ~ ವರ್ಗಕ್ಕೆ ಸೇರ್ಪಡೆ ಮಾಡಿ ಭಾರಿ ದಂಡಕ್ಕೆ ಶಿಫಾರಸು ಮಾಡಲಾಗಿದೆ. ಇದು ಸರಿಯಲ್ಲ ಎಂದು ಗಣಿ ಕಂಪೆನಿಗಳು ಮನವಿ ಮಾಡಿದವು. ಏನೇ ಆಕ್ಷೇಪಣೆಗಳಿದ್ದರೂ ಸಿಇಸಿ ಮುಂದೆ ವೈಯಕ್ತಿಕವಾಗಿ ಇಲ್ಲವೆ ಗುಂಪಾಗಿ ಅರ್ಜಿ ಸಲ್ಲಿಸಿ ಎಂದು ನ್ಯಾಯಾಲಯ ಸಲಹೆ ಮಾಡಿತು.

ಅಕ್ರಮ ಗಣಿಗಾರಿಕೆಯಿಂದ ನಾಶವಾಗಿರುವ ಅರಣ್ಯ ಪುನರ್ ನಿರ್ಮಾಣ ಆದಷ್ಟು ತ್ವರಿತವಾಗಿ ಆಗಬೇಕು. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಯೋಜನೆ ಜಾರಿ ಆಗಬೇಕು. ಅದಷ್ಟೇ ತನ್ನ ಕಳಕಳಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಈ ಪ್ರಕರಣದ ವಿಚಾರಣೆ ವೇಳೆ ಜನಾರ್ದನರೆಡ್ಡಿ ಪರ ವಕೀಲ ಮುಕುಲ್ ರೋಹಟಗಿ, ರೆಡ್ಡಿ ವಿರುದ್ಧ ಸಲ್ಲಿಸುವ ಆರೋಪ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಕೆಳ ನ್ಯಾಯಾಲಯಗಳು ಅವರಿಗೆ ಜಾಮೀನು ನೀಡಲು ಹಿಂಜರಿಯುತ್ತಿವೆ. ಈ ಪ್ರಕರಣದಲ್ಲಿ ಒಬ್ಬರು ಆರೋಪಿಗೆ ನೀಡಲಾಗಿದ್ದ ಜಾಮೀನು ಕೂಡಾ ರದ್ದಾಗಿದೆ ಎಂದು ತಿಳಿಸಿದರು. ಸಿಬಿಐ  ಮೊದಲು ಆರೋಪ ಪಟ್ಟಿ ಸಲ್ಲಿಸಲಿ ಎಂದು ನ್ಯಾಯಮೂರ್ತಿಗಳು ಹೇಳಿದರು.

ಗಣಿ ಗುತ್ತಿಗೆಗಳನ್ನು ಸಿಇಸಿ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಮೊದಲ ವರ್ಗದ ಗಣಿಗಾರಿಕೆ ಆರಂಭಕ್ಕೆ ಸಿಇಸಿ ಹಸಿರು ನಿಶಾನೆ ತೋರಿದೆ. ಬಿ ವರ್ಗದ ಗುತ್ತಿಗೆಗಳಿಗೆ ಭಾರಿ ದಂಡ ಹಾಕಬೇಕು. ಗುತ್ತಿಗೆದಾರರ ವೆಚ್ಚದಲ್ಲೇ ಅರಣ್ಯ ಪುನರ್ ನಿರ್ಮಾಣ ಮಾಡಬೇಕು ಎಂದು ಹೇಳಿದೆ. ಸಿ ವರ್ಗದ 49 ಗುತ್ತಿಗೆಗಳ ರದ್ದಿಗೆ ಶಿಫಾರಸು ಮಾಡಿ ಇ- ಹರಾಜು ಮೂಲಕ ಪುನಃ ಮಂಜೂರಾತಿ ಮಾಡಬೇಕು ಎಂದು ಸಲಹೆ ಮಾಡಿದೆ.

ಸಿ ಗುಂಪಿನಲ್ಲಿ ಜನಾರ್ದನರೆಡ್ಡಿ, ವಿ. ಸೋಮಣ್ಣ ಪುತ್ರರು, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ ಹಾಗೂ ಅನಿಲ್ ಲಾಡ್ ಅವರ ಕಂಪೆನಿಗಳು ಸೇರಿವೆ.
 
 
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.