ADVERTISEMENT

ಬೃಂದಾವನಸ್ಥರಾದ ಕಾಂಚಿ ಶ್ರೀ

ಪಿಟಿಐ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಶ್ರೀಗಳ ಭೌತಿಕ ಕಾಯಕ್ಕೆ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಅಭಿಷೇಕ ಮಾಡಿದರು –ಪಿಟಿಐ ಚಿತ್ರ
ಶ್ರೀಗಳ ಭೌತಿಕ ಕಾಯಕ್ಕೆ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಅಭಿಷೇಕ ಮಾಡಿದರು –ಪಿಟಿಐ ಚಿತ್ರ   

ಕಂಚೀಪುರಂ : ಬುಧವಾರ ಇಹಲೋಕ ತ್ಯಜಿಸಿದ್ದ ಕಾಂಚೀ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ ಜಯೇಂದ್ರ ಸರಸ್ವತೀ ಸ್ವಾಮೀಜಿ ಅವರ ಅಂತ್ಯಕ್ರಿಯೆಯು ವೇದಘೋಷಗಳೊಂದಿಗೆ ಮಠದ ಆವರಣದಲ್ಲಿರುವ ಬೃಂದಾವನ ಸಂಕೀರ್ಣದಲ್ಲಿ ಗುರುವಾರ ನೆರವೇರಿತು. 

ಕುಳಿತ ಭಂಗಿಯಲ್ಲಿದ್ದ ಶ್ರೀಗಳ ಭೌತಿಕ ಶರೀರವನ್ನು ಬಿದಿರಿನ ದೊಡ್ಡ ಪೆಟ್ಟಿಗೆಯಲ್ಲಿಟ್ಟು ಸಮಾಧಿಗಾಗಿ ನಿಗದಿ ಪಡಿಸಿದ್ದ ಹೊಂಡದಲ್ಲಿ ಇರಿಸಲಾಯಿತು. ಅದಕ್ಕೆ ಬಜೆ ಸೇರಿದಂತೆ ಹಲವು ಗಿಡಮೂಲಿಕೆಗಳು, ಶ್ರೀಗಂಧ, ಉಪ್ಪು ಮತ್ತು ಮರಳನ್ನು ತುಂಬಿ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಯಿತು.

ಬೆಳಿಗ್ಗೆ 7.45ಕ್ಕೆ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಮೂರೂವರೆ ಗಂಟೆ ನಡೆಯಿತು. ಶ್ರೀಗಳ ದೇಹಕ್ಕೆ ಅಭಿಷೇಕ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. ಮಠದ ಉತ್ತರಾಧಿಕಾರಿ ವಿಜಯೇಂದ್ರ ಸರಸ್ವತೀ ಮತ್ತು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.

ADVERTISEMENT

ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಕೇಂದ್ರ ಸಚಿವರಾದ ಪೊನ್‌ ರಾಧಾಕೃಷ್ಣನ್‌, ಸದಾನಂದ ಗೌಡ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಗೊಂದಲ ಸ್ಥಿತಿ ನಿರ್ಮಾಣ

ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮಠದ ಆವರಣದಲ್ಲಿ ಕೆಲ ಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತು.

ಸಮಾಧಿ ಮಾಡುವ ಸ್ಥಳಕ್ಕೆ (ಬೃಂದಾವನದ ಸಂಕೀರ್ಣ) ಶ್ರೀಗಳ ಶರೀರವನ್ನು ತೆಗೆದುಕೊಂಡು ಹೋದ ನಂತರ, ಕೊನೆಯ ಹಂತದ ವಿಧಿ ವಿಧಾನಗಳು ಯಾರಿಗೂ ಕಾಣದಂತೆ ಮಾಡಲು ಪರದೆ ಇಳಿಬಿಡಲಾಯಿತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.

ಅಭಿಷೇಕ, ಮಂಗಳಾರತಿ ಸೇರಿದಂತೆ ಅದುವರೆಗೂ ನಡೆದ ಧಾರ್ಮಿಕ ವಿಧಿಗಳನ್ನು ಎಲ್‌ಇಡಿಯ ಬೃಹತ್‌ ಪರದೆಗಳ ಮೂಲಕ ಪ್ರಸಾರ ಮಾಡಲಾಗಿತ್ತು. ಆದರೆ, ಸಮಾಧಿಸ್ಥಳದಲ್ಲಿ ನಡೆದ ವಿಧಿಗಳನ್ನು ಪ್ರಸಾರ ಮಾಡದೇ ಇದ್ದುದರಿಂದ ಭಕ್ತರು ಕೋಪಗೊಂಡರು. ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕಾಗಿ ಭಕ್ತರು ಬೃಂದಾವನದತ್ತ ನುಗ್ಗಿದರು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.