ADVERTISEMENT

ಭೂ ವಿವಾದ: ಮಹಿಳೆಯ ಎದೆಗೆ ತುಳಿದ ತೆಲಂಗಾಣದ ಸ್ಥಳೀಯ ಸಂಸ್ಥೆಯ ಮುಖ್ಯಸ್ಥ

ಪಿಟಿಐ
Published 18 ಜೂನ್ 2018, 3:50 IST
Last Updated 18 ಜೂನ್ 2018, 3:50 IST
ಕೃಪೆ:ಯೂಟ್ಯೂಬ್
ಕೃಪೆ:ಯೂಟ್ಯೂಬ್   

ಹೈದರಾಬಾದ್:ಭೂಮಿ ವಿವಾದ ಸಂಬಂಧ ನಡೆದ ವಾಗ್ವಾದದಲ್ಲಿ ಮಹಿಳೆಯೊಬ್ಬರು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಚಪ್ಪಲಿಯಲ್ಲಿ ಹೊಡೆದಾಗ ಆತ ಆಕೆಯ ಎದೆಗೆ ತುಳಿದಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಧಾರ್‍ಪಲ್ಲಿ ಮಂಡಲ್ (ಸ್ಥಳೀಯ ಸಂಸ್ಥೆ ) ಅಧ್ಯಕ್ಷ ಇಮ್ಮಡಿ ಗೋಪಿ ಎಂಬವರು ಸಾರ್ವಜನಿಕರ ಮುಂದೆ ಮಹಿಳೆಯ ಎದೆಗೆ ತುಳಿದಿದ್ದಾರೆ.

ಮಹಿಳೆಯ ದೂರು ಆಧರಿಸಿ ಗೋಪಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅದೇ ವೇಳೆ ಮಹಿಳೆ ಮತ್ತು ಆಕೆಯ ಕುಟುಂಬ ತನ್ನ ಆಸ್ತಿ ನಾಶ ಮಾಡಿದ್ದಾರೆ ಎಂದು ಆರೋಪಿಸಿ ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯನಾಗಿರುವ ಗೋಪಿ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ADVERTISEMENT

ಗೋಪಿ ಅವರಿಂದ ಖರೀದಿಸಿದ ಭೂಮಿಯ ಒಡೆತನದ ಪತ್ರವನ್ನು ನೀಡಲು ವಿಳಂಬ ಮಾಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಕುಟುಂಬ ಗೋಪಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿತ್ತು.

ಐಎಎನ್‍ಎಸ್ ಸುದ್ದಿಸಂಸ್ಥೆ ಪ್ರಕಾರ, ಮಹಿಳೆಯ ಕುಟುಂಬ 10 ತಿಂಗಳ ಹಿಂದೆ ಗೋಪಿ ಅವರಿಂದ ₹33 ಲಕ್ಷ ಮೌಲ್ಯದ ಭೂಮಿ ಖರೀದಿಸಿತ್ತು. ಆದರೆ ಈ ಭೂಮಿಯ ಒಡೆತನದ ಪತ್ರವನ್ನು ಗೋಪಿ ಅವರು ನೀಡಿರಲಿಲ್ಲ. ಆದಾಗ್ಯೂ, ಖರೀದಿಸಿದ ಭೂಮಿಗೆ ಹೆಚ್ಚುವರಿಯಾಗಿ ₹50 ಲಕ್ಷ ನೀಡಬೇಕೆಂದು ಗೋಪಿ ಒತ್ತಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವಾರ ಈ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು.

ಭಾನುವಾರ ಮಹಿಳೆ ಗೋಪಿಯವರ ಮನೆಗೆ ಹೋಗಿ ಇದೇ ವಿಷಯದ ಬಗ್ಗೆ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಮಹಿಳೆ ಗೋಪಿಯವರಿಗೆ ಚಪ್ಪಲಿಯಲ್ಲಿ ಹೊಡೆದಾಗ ಗೋಪಿ ಆಕೆಯ ಎದೆಗೆ ತುಳಿದಿದ್ದಾರೆ ಎಂದಿದ್ದಾರೆ ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.