ADVERTISEMENT

ಮುಖ್ಯಮಂತ್ರಿಯಾಗಿ ಪರಿಕ್ಕರ್ ಪ್ರಮಾಣ

ಸುಪ್ರೀಂಕೋರ್ಟ್ನಲ್ಲಿ ಕಾಂಗ್ರೆಸ್ ಪ್ರಯತ್ನ ವ್ಯರ್ಥ

ಏಜೆನ್ಸೀಸ್
Published 14 ಮಾರ್ಚ್ 2017, 17:15 IST
Last Updated 14 ಮಾರ್ಚ್ 2017, 17:15 IST
ಕೃಪೆ: ಟ್ವಿಟರ್ (ಎಎನ್‍ಐ)
ಕೃಪೆ: ಟ್ವಿಟರ್ (ಎಎನ್‍ಐ)   

ಪಣಜಿ:  ಮನೋಹರ ಪರಿಕ್ಕರ್ ಅವರು ಗೋವಾದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ಪರಿಕ್ಕರ್ ಅವರು ಗುರುವಾರ ವಿಶ್ವಾಸಮತ ಸಾಬೀತು ಮಾಡಬೇಕಿದೆ.

ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನ ದೊರೆತಿರುವುದು ತನಗೆ, ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಬೆಳಿಗ್ಗೆ ತಿರಸ್ಕರಿಸಿತ್ತು.

ಬಿಜೆಪಿಯ ಇಬ್ಬರು, ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್‌ಪಿ) ಮೂವರು, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಇಬ್ಬರು ಮತ್ತು ಇಬ್ಬರು ಪಕ್ಷೇತರ ಶಾಸಕರು ಪರಿಕ್ಕರ್‌ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ಇದರೊಂದಿಗೆ, ಪರಿಕ್ಕರ್ ಅವರು ಗೋವಾದ ಮುಖ್ಯಮಂತ್ರಿಯಾಗಿ ನಾಲ್ಕನೆಯ ಬಾರಿ ಪ್ರಮಾಣ ವಚನ ಸ್ವೀಕರಿಸಿದಂತೆ ಆಗಿದೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ಗೋಪ್ಯತೆಯ ಪ್ರಮಾಣ ಬೋಧಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶ್ವಾಸಮತ ಸಾಬೀತು ಮಾಡಿದ ನಂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಪರಿಕ್ಕರ್ ಹೇಳಿದರು.

ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಗೋವಾ ರಾಜಕೀಯಕ್ಕೆ ಮರಳುವ ತಮ್ಮ ನಿರ್ಧಾರ ಸಮರ್ಥಿಸಿದ ಪರಿಕ್ಕರ್, ‘ಪ್ರಾದೇಶಿಕ ಪಕ್ಷಗಳು ಮುಂದಾಗಿ ಈ ಸರ್ಕಾರ ರಚಿಸಿವೆ. ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಅವು ನನ್ನಲ್ಲಿ ಮನವಿ ಮಾಡಿದ್ದವು’ ಎಂದರು.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 21 ಶಾಸಕರ ಬೆಂಬಲ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.