ADVERTISEMENT

ಮೋದಿ ವಿರೋಧಿಸುವ ಸಾಧ್ಯತೆ

ಜೆಡಿಯು ಪಕ್ಷದ ರಾಷ್ಟ್ರೀಯ ಸಭೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 10:09 IST
Last Updated 13 ಏಪ್ರಿಲ್ 2013, 10:09 IST

ನವದೆಹಲಿ (ಪಿಟಿಐ): ಶನಿವಾರ ಇಲ್ಲಿ ಆರಂಭವಾದ ಜೆಡಿಯು ಪಕ್ಷದ ಎರಡು ದಿನಗಳ ರಾಷ್ಟ್ರೀಯ ಸಭೆಯಲ್ಲಿ ಬಿಜೆಪಿಯಲ್ಲಿ ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿಯಾಗಿರುವ ನರೇಂದ್ರ ಮೋದಿ ಅವರ ಅಭ್ಯರ್ಥಿತನವನ್ನು ವಿರೋಧಿಸುವ ಸಾಧ್ಯತೆ ಇದೆ. ಎರಡು ದಿನಗಳ ಕಾಲ ಜರಗುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಹಾಗೂ ರಾಷ್ಟ್ರೀಯ ಸಮಾಲೋಚನ ಸಭೆಯಲ್ಲಿ ಶರದ್ ಯಾದವ್ ಅವರನ್ನು ಮೂರನೇಯ ಬಾರಿಗೆ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು.

2006ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಂದ ತೆರವಾದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶರದ್ ಅವರನ್ನು ಮೂರನೇಯ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷದ ಸಂವಿಧಾನಕ್ಕೆ ಮಾರ್ಚ್ 5 ರಂದು ತಿದ್ದುಪಡಿ ಮಾಡಲಾಗಿತ್ತು.

ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ ಜೆಡಿಯು ಈ ಸಭೆಯಲ್ಲಿ ಬಿಜೆಪಿಯು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಂತೆ ಬಿಂಬಿಸುವುದನ್ನು ವಿರೋಧಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಜೆಡಿಯುನ ರಾಜ್ಯಸಭೆ ಸದಸ್ಯ ಅಲಿ ಅನ್ವರ್ ಅನ್ಸಾರಿ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ `ಕೆಲ ಕೋಮುವಾದಿ ನಾಯಕರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಗಳನ್ನಾಗಿ ಬಿಂಬಿಸುತ್ತಿರುವುದರಿಂದ ಇದು ಪಕ್ಷದ ಹಳೆಯ ನಿಲುವಾಗಿದೆ. ಓರ್ವ ನಾಯಕ ಎಲ್ಲ ವರ್ಗಗಳ ಒಗ್ಗಟ್ಟಿನ ಮಾತನಾಡುವವರು ನಂಬುವಂತೆ ಹಾಗೂ ಎಲ್ಲರೂ ಸ್ವೀಕರಿಸುವಂತಿರಬೇಕು. ಚುನಾವಣೆಗೂ ಪೂರ್ವದಲ್ಲಿ ಎನ್‌ಡಿಎ ಕೂಡ ಇಂತಹ ನಾಯಕನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.