ADVERTISEMENT

ಯೆಚೂರಿ ಪತ್ರಿಕಾಗೋಷ್ಠಿ ತಡೆಗೆ ಯತ್ನ

ಹಿಂದೂ ಸೇನಾ ಸಂಘಟನೆ ಕಾರ್ಯಕರ್ತರ ಕೃತ್ಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 18:42 IST
Last Updated 7 ಜೂನ್ 2017, 18:42 IST
ಯೆಚೂರಿ ಪತ್ರಿಕಾಗೋಷ್ಠಿ ತಡೆಗೆ ಯತ್ನ
ಯೆಚೂರಿ ಪತ್ರಿಕಾಗೋಷ್ಠಿ ತಡೆಗೆ ಯತ್ನ   

ನವದೆಹಲಿ: ಹಿಂದೂ ಸೇನಾ ಎಂಬ ಬಲಪಂಥೀಯ ಸಂಘಟನೆಯ ಇಬ್ಬರು ಕಾರ್ಯಕರ್ತರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಪತ್ರಿಕಾಗೋಷ್ಠಿಗೆ ಬುಧವಾರ ತಡೆಯೊಡ್ಡಲು ಯತ್ನಿಸಿದರು.

ಕಾಶ್ಮೀರದಲ್ಲಿ ಕಲ್ಲುತೂರಾಟಗಾರರ ವಿರುದ್ಧ ಮೇಜರ್‌ ಲೀತುಲ್‌ ಗೊಗೊಯ್‌ ಕೈಗೊಂಡ ಕ್ರಮವನ್ನು ಟೀಕಿಸಿ ಯೆಚೂರಿ ಅವರು ಬರೆದಿದ್ದ ಲೇಖನದ ವಿರುದ್ಧ ಪ್ರತಿಭಟಿಸಲು ಇಬ್ಬರು ಈ ರೀತಿ ಮಾಡಿದರು.

ಸಿಪಿಎಂ ಕಾರ್ಯಕರ್ತರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ADVERTISEMENT

‘ನಮ್ಮ ಬಾಯಿ ಮುಚ್ಚಿಸಲು ಸಂಘ (ಆರ್‌ಎಸ್‌ಎಸ್‌) ನಡೆಸುವ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ. ಇದು ಭಾರತದ ಅಂತಃಸತ್ವಕ್ಕಾಗಿ ನಡೆಯುತ್ತಿರುವ ಯುದ್ಧ. ಅದನ್ನು ನಾವು ಗೆಲ್ಲುತ್ತೇವೆ’ ಎಂದು ನಂತರ ಯೆಚೂರಿ ಟ್ವೀಟ್‌ ಮಾಡಿದ್ದಾರೆ.

ನಡೆದಿದ್ದೇನು?: ಎರಡು ದಿನಗಳ ಸಿಪಿಎಂ ಪಾಲಿಟ್‌ಬ್ಯೂರೊ ಸಭೆ ಮುಕ್ತಾಯದ ಬಗ್ಗೆ  ಮಾಹಿತಿ ನೀಡಲು ಸೀತಾರಾಂ ಯೆಚೂರಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು.

ಯಾರ ಗಮನಕ್ಕೆ ಬರದಂತೆ ಕಚೇರಿಯೊಳಕ್ಕೆ ಬಂದ ಇಬ್ಬರು, ‘ಹಿಂದೂ ಸೇನಾ ಜಿಂದಾಬಾದ್‌’ ಮತ್ತು ‘ಸಿಪಿಎಂ ಮುರ್ದಾಬಾದ್‌’ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದರು.

‘ಇಬ್ಬರು ಆರ್‌ಎಸ್‌ಎಸ್‌ ಕಿಡಿಗೇಡಿಗಳು ಪತ್ರಕರ್ತರ ಸೋಗಿನಲ್ಲಿ ಪತ್ರಿಕಾ ಗೋಷ್ಠಿಗೆ ಅಡ್ಡಿಪಡಿಸುವುದಕ್ಕಾಗಿ ಸಿಪಿಎಂ ಕಚೇರಿ ಪ್ರವೇಶಿಸಲು ಯತ್ನಿಸಿದರು’ ಎಂದು ಯೆಚೂರಿ ಹೇಳಿದ್ದಾರೆ.

‘ಆರ್‌ಎಸ್‌ಎಸ್‌ ಈ ರೀತಿಯ ರಾಜಕೀಯವನ್ನೇ ಮಾಡುತ್ತಾ ಬಂದಿದೆ. ಹಿಂಸಾಚಾರ ಮತ್ತು ಭಯ ಸೃಷ್ಟಿಸದೆ, ತನ್ನ ರಾಜಕೀಯ ಪ್ರಭಾವ ಹೆಚ್ಚಿಸಲು ಅದಕ್ಕೆ ಯಾವತ್ತೂ ಸಾಧ್ಯವಾಗಿಲ್ಲ. ಇಂತಹ ತಂತ್ರಕ್ಕೆ  ಭಾರತದ ಜನ ಈ ಹಿಂದೆ ಉತ್ತರ ಕೊಟ್ಟಿದ್ದಾರೆ. ಮತ್ತೊಮ್ಮೆ ಕೊಡಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.