ADVERTISEMENT

ರಾಜಕೀಯ ಪಕ್ಷಗಳ ಲೆಕ್ಕ ಪರಿಶೋಧಕರ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣದ ಚಲಾವಣೆ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿರುವ ಚುನಾವಣಾ ಆಯೋಗ ಸರ್ವ ಸಿದ್ಧತೆ ಮಾಡುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಪರಿಶೋಧಕರ ಜತೆ  ಆಯೋಗ ಸೋಮವಾರ ಸಭೆ ನಡೆಸಿದ್ದು, ಕಪ್ಪು ಹಣ ಬಳಕೆ ತಡೆಗೆ ಪಾರದರ್ಶಕ ಮಾರ್ಗದರ್ಶಿ ಸೂತ್ರಗಳು ಮತ್ತು ಹಣ ಬಳಸಿದ ಬಗ್ಗೆ ಮಾಹಿತಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಸಿತು.

  ರಾಜಕೀಯ ಪಕ್ಷಗಳು ಹಣಕಾಸಿನ ವರದಿಯನ್ನು ಹೇಗೆ ನೀಡಬೇಕು ಎಂಬ ಬಗ್ಗೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ರಾಜ ಕೀಯ ಪಕ್ಷಗಳ ಲೆಕ್ಕಪರಿಶೋಧಕರಿಗೆ ಚುನಾವಣಾ ಆಯೋಗದ ಅಧಿಕಾರಿಗಳು ವಿವರಿಸಿದರು.

  ಆಯೋಗದ ಪರಿಷ್ಕೃತ ಪಾರದರ್ಶಕ ಸೂತ್ರಗಳ ಪ್ರಕಾರ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ವೆಚ್ಚ ಮಾಡಿರುವ ಹಣಕಾಸಿನ ವಿವರಗಳನ್ನು ಅಕ್ಟೋಬರ್‌ 30 ರೊಳಗೆ ಕಡ್ಡಾಯ ವಾಗಿ ನೀಡಬೇಕು ಎಂದು ಸೂಚಿಸಿದೆ. ಇದೇ ವೇಳೆ ಸಲಹೆ ಸೂಚನೆಗಳನ್ನು ನೀಡುವಂತೆಯೂ ಲೆಕ್ಕಪರಿಶೋಧಕರಿಗೆ  ತಿಳಿಸಿದೆ.

ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗೆ ಹಣ ನೀಡುವು ದಾದರೆ ನಿಗದಿಪಡಿಸಿದ ವೆಚ್ಚಕ್ಕಿಂತ ಹೆಚ್ಚು ನೀಡಬಾರದು, ಕ್ರಾಸ್‌ ಮಾಡಿದ ಚೆಕ್‌ಗಳನ್ನೇ ಖಾತೆದಾರರಿಗೆ  ನೀಡ ಬೇಕು ಎಂದು ಸೂಚಿಸಿದೆ. ಇದೇ ವೇಳೆ ಎಲ್ಲ ವಹಿವಾಟು ಬ್ಯಾಂಕ್‌ ಮೂಲಕವೇ ನಡೆಯಬೇಕು. ನಗದನ್ನು ನೇರವಾಗಿ ನೀಡುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.