ADVERTISEMENT

ರಾಜದಂಪತಿ ಮಧುಚಂದ್ರಕ್ಕೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್):  ಭಾರತ ಪ್ರವಾಸದಲ್ಲಿರುವ ಭೂತಾನ್‌ನ ರಾಜ ದಂಪತಿಗೆ ರೈಲ್ವೆ ಇಲಾಖೆ ವಿಶೇಷ ಗೌರವ ನೀಡಿದ್ದು, ಅವರ ಮಧುಚಂದ್ರಕ್ಕಾಗಿ ಐಷಾರಾಮಿ ರೈಲಿನ ವ್ಯವಸ್ಥೆ ಮಾಡಿದೆ.

 ದೊರೆ ಜಿಗ್ಮೆ ಖೇಸರ್ ವಾಂಚುಕ್ ಮತ್ತು ರಾಣಿ ಜಟ್‌ಸುನ್ ಪೆಮಾ ಅವರು ಅಕ್ಟೋಬರ್ 13ರಂದು ವಿವಾಹವಾಗಿದ್ದು, ಒಂಬತ್ತು ದಿನಗಳ ಪ್ರವಾಸಕ್ಕಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ.

ರಾಜಸ್ತಾನದ ಕೋಟೆಗಳು ಮತ್ತು ಅರಮನೆ, ಹುಲಿಧಾಮಕ್ಕೆ ಅವರು ಭೇಟಿ ನೀಡಲಿದ್ದಾರೆ.  ವಿದೇಶಾಂಗ ಇಲಾಖೆಯ ಕೋರಿಕೆ ಮೇಲೆ ರೈಲ್ವೆ ಇಲಾಖೆ ರಾಜ ದಂಪತಿಗೆ ವಿಶೇಷ ಸೌಲಭ್ಯ ಇರುವ ರೈಲಿನ ವ್ಯವಸ್ಥೆ ಕಲ್ಪಿಸಿದೆ. ರೈಲಿನ ಈ ಕೋಚ್‌ನಲ್ಲಿ ಶಯನಗೃಹ, ಊಟದ ಕೋಣೆ ಸೌಲಭ್ಯವೂ ಇದೆ. ಜತೆಗೆ ಕೆಲವು ಹವಾನಿಯಂತ್ರಿತ ಬೋಗಿಗಳು ಇದ್ದು, ಇದರಲ್ಲಿ ರಾಜದಂಪತಿ ಜತೆ ಇರುವ ಅಂಗರಕ್ಷಕರು ಮತ್ತು ಸಿಬ್ಬಂದಿ ಪ್ರಯಾಣ ಮಾಡಲಿದ್ದಾರೆ.

ಲಘು ಎಂಜಿನ್ ಚಾಲಿತ ಪುಟ್ಟ ರೈಲು ಇದಾಗಿದ್ದು, ಈ ರೈಲಿನ ಮಾರ್ಗವು ಅತಿಗಣ್ಯ ವ್ಯಕ್ತಿಗಳ (ವಿಐಪಿ) ಮಾರ್ಗ ಎಂದು ಘೋಷಿಸಲ್ಪಟ್ಟಿದೆ.

ಆಕ್ಸ್‌ಫರ್ಡ್ ವಿವಿಯಲ್ಲಿ ಶಿಕ್ಷಣ ಪಡೆದಿರುವ 31 ವರ್ಷದ ರಾಜ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಆಪ್ತ ಸ್ನೇಹಿತರಾಗಿದ್ದಾರೆ. ರಾಜ ದಂಪತಿ ವಿವಾಹ ಸಂದರ್ಭದಲ್ಲಿ ಕೆಲವೇ ಅತಿಥಿಗಳಲ್ಲಿ ರಾಹುಲ್ ಸಹ ಒಬ್ಬರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.