ADVERTISEMENT

ರಾಮ್‌ದೇವ್ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ: ಆಶ್ರಮಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

 ಹರಿದ್ವಾರ (ಪಿಟಿಐ): ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಸಾರಿ ಇಲ್ಲಿ ನಿರಶನಕ್ಕೆ ಕುಳಿತಿರುವ ಬಾಬಾ ರಾಮ್‌ದೇವ್ ಅವರಿಗೆ ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ವಿವಿಧ ಜಾತಿ, ಧರ್ಮದ ಜನರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆಬಾಲ ವೃದ್ಧರಾದಿಯಾಗಿ ಬರುತ್ತಿರುವ ಜನ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ ಮತ್ತು ವಿವಿಧ ಧಾರ್ಮಿಕ ಮುಖಂಡರ ಭಾಷಣವನ್ನು ಆಸಕ್ತಿಯಿಂದ ಕೇಳುತ್ತಿದ್ದಾರೆ.

ಹರಿದ್ವಾರದಿಂದ 20 ಕಿ.ಮೀ ದೂರದಲ್ಲಿರುವ ಪತಂಜಲಿ ಯೋಗಪೀಠ ಆಶ್ರಮದ ಯಾಗ ಶಾಲೆಯಲ್ಲಿ ನಿರಶನ ನಡೆಯುತ್ತಿದೆ.

`ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರಿಸಬೇಕು ಎಂದು ಒತ್ತಾಯಿಸುವ ಮಹಾ ಆಂದೋಲನದಲ್ಲಿ ಪಾಲ್ಗೊಂಡು ದೇಶವನ್ನು ಭ್ರಷ್ಟ ವ್ಯವಸ್ಥೆಯಿಂದ ಮುಕ್ತಗೊಳಿಸಲು ಹೊರಟಿರುವ ಬಾಬಾ ಅವರಿಗೆ ನೆರವಾಗಲು ನಾನು ಇಲ್ಲಿಗೆ ಬಂದಿದ್ದೇನೆ~ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸಂಚಾಲಕ ಡಾ. ಸದಕತ್ ಅಲಿ ತಿಳಿಸಿದರು.

`ಜನರ ಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಚಳವಳಿಯಲ್ಲಿ ಭಾಗವಹಿಸಲು ಖುಷಿಯಾಗುತ್ತದೆ~ ಎಂದು ದೆಹಲಿಯ ರಿಯಲ್ ಎಸ್ಟೇಟ್ ಉದ್ಯಮಿ ರಾಕೇಶ್ ಸಿಂಗ್ ಹೇಳಿದರು.

`ಕಳೆದ 10 ವರ್ಷಗಳಿಂದ ನಾನು ಬಾಬಾ ಅವರ ಸಂಪರ್ಕದಲ್ಲಿದ್ದೇನೆ. ಈಗ ಜನರ ಕಲ್ಯಾಣಕ್ಕಾಗಿ ಅವರು ನಡೆಸುತ್ತಿರುವ ನಿರಶನದಲ್ಲಿ ಭಾಗಿಯಾಗಿದ್ದೇನೆ~ ಎಂದು ಹಿಸ್ಸಾರ್‌ನ ಸಂಜಯ್ ಕುಮಾರ್ ಹೇಳಿದರು.

 ವಿವಿಧ ಕಡೆಗಳಿಂದ ಬಂದಿರುವ ಸಾಕಷ್ಟು ಮಾಧ್ಯಮ ಮಂದಿಯೂ ಇಲ್ಲಿ ಬೀಡುಬಿಟ್ಟಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.